ADVERTISEMENT

ಎಂಎಸ್‌ಪಿ ಅಕ್ಕಿ ಸಾಗಣೆ: ತನಿಖೆಗೆ ಕಾಂಗ್ರೆಸ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 16:37 IST
Last Updated 12 ಜುಲೈ 2021, 16:37 IST

ಬೆಂಗಳೂರು: ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ಖರೀದಿಸಿದ್ದ ಭತ್ತದಿಂದ ಪಡೆದ 14,344 ಟನ್‌ ಅಕ್ಕಿಯನ್ನು ನಿಯಮ ಪಾಲಿಸದೇ ಮಂಡ್ಯ ಜಿಲ್ಲೆಯ ಗಿರಣಿಗಳಿಂದ ಸಾಗಿಸಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌ ಒತ್ತಾಯಿಸಿದೆ.

‘ಪ್ರಜಾವಾಣಿ’ಯ ಸೋಮವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಎಂಎಸ್‌ಪಿ ಅಕ್ಕಿ ಸಾಗಣೆಯಲ್ಲಿ ಅಕ್ರಮ?’ ಎಂಬ ವರದಿಯನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಕಳೆದ ಬಾರಿಯೂ ಕೇಂದ್ರದಿಂದ ಬಂದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಲು ಪ್ರಯತ್ನಿಸಲಾಗಿತ್ತು. ಕಳ್ಳ ಲೆಕ್ಕದಿಂದ ಬಡವರ ಅಕ್ಕಿ ಕೊಳ್ಳೆ ಹೊಡೆಯುವವರ ವಿರುದ್ಧ ಸರ್ಕಾರ ಇನ್ನಾದರೂ ಕ್ರಮ ಕೈಗೊಳ್ಳುವುದೆ’ ಎಂದು ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಟ್ವಿಟರ್‌ ಖಾತೆಯಿಂದಲೂ ಪ್ರತ್ಯೇಕ ಟ್ವೀಟ್‌ ಮಾಡಿದ್ದು, ‘ಕಾಂಗ್ರೆಸ್‌ನದ್ದು ಅನ್ನಭಾಗ್ಯ, ಬಿಜೆಪಿಯದ್ದು ಕನ್ನಭಾಗ್ಯ. ಬಿಜೆಪಿ ಆಡಳಿತದಲ್ಲಿ ಬಡವರ ಪಡಿತರ ಅಕ್ಕಿಯ ಕಳ್ಳಸಾಗಣೆ ಎಗ್ಗಿಲ್ಲದೇ ಸಾಗಿದ್ದರೂ ತಡೆಗಟ್ಟುವ ಯಾವ ಕ್ರಮವನ್ನೂ ಸರ್ಕಾರ ಕೈಗೊಂಡಿಲ್ಲ. ಸರ್ಕಾರದ ನಿರ್ಲಕ್ಷ್ಯ ನೋಡಿದರೆ ಇದರಲ್ಲಿ ಬಿಜೆಪಿಯವರ ಪಾಲುದಾರಿಕೆಯೂ ಇರುವಂತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಕೂಡಲೇಈ ಕಳ್ಳದಂಧೆ ತಡೆಗಟ್ಟಿ’ ಎಂದು ಒತ್ತಾಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.