ADVERTISEMENT

ಪಾಕಿಸ್ತಾನ ಪರ ಹೇಳಿಕೆ ನೀಡಿದರೂ ಸಿಧು ವಿರುದ್ಧ ಕ್ರಮ ಕೈಗೊಳ್ಳದ ಕಾಂಗ್ರೆಸ್: ಜೋಶಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 9:06 IST
Last Updated 5 ಡಿಸೆಂಬರ್ 2021, 9:06 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನ ಪರ ಹೇಳಿಕೆ ನೀಡಿದ್ದರೂ, ಆ ಪಕ್ಷ ಈವರೆಗೂ ಅವರ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಅತೀ ಹಳೆಯ ಪಕ್ಷ ತಮ್ಮದು ಎಂದು‌ ಹೇಳಿಕೊಳ್ಳುವ ಕಾಂಗ್ರೆಸ್, ಅದರ ಚುಕ್ಕಾಣಿ ಹಿಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು ಸಿಧುಗೆ ಕನಿಷ್ಠ ಎಚ್ಚರಿಕೆ ನೀಡಲು ಮುಂದಾಗಿಲ್ಲ. ಅವರ ಪಕ್ಷ ದುರ್ಬಲ ಆಗಿರುವುದಕ್ಕೆ ಇದೇ ನಿದರ್ಶನ. ಈ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಲಿ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಹುಲ್ ಗಾಂಧಿ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಅವರೊಬ್ಬ ಪಾರ್ಟ್ ಟೈಂ ರಾಜಕಾರಣಿಯಾಗಿದ್ದು, ಈಗಾಗಲೇ ಇದ್ದ ಮೀನುಗಾರಿಕೆ ಇಲಾಖೆಯನ್ನು ಪುನಃ ಸ್ಥಾಪಿಸುವುದಾಗಿ ಹಿಂದೊಮ್ಮೆ ಹೇಳಿ ನಗೆಪಾಟಲಿಗೆ ಒಗಾಗಿದ್ದರು ಎಂದು ಟೀಕಿಸಿದರು.

ADVERTISEMENT

ರಾಹುಲ್ ಗಾಂಧಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ನಮ್ಮಲ್ಲಿ‌ ಪ್ರಶ್ನೆಯನ್ನೇ ಕೇಳಬೇಡಿ. ಕಾಂಗ್ರೆಸ್ 60 ವರ್ಷಗಳ ಕಾಲ ದೇಶದ ಆಡಳಿತ ನಡೆಸಿತ್ತು. ಆಗ ಮೀನುಗಾರರಿಗೆ ಏನು ಮಾಡಿತ್ತು. ನಾವು ಅಧಿಕಾರಕ್ಕೆ ಬಂದ ನಂತರ ಮೀನುಗಾರಿಕೆ ಇಲಾಖೆ ಆರಂಭಿಸಿದ್ದೇವೆ. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ವಲಯ ಘೋಷಣೆಯ ಡಾ.ಕೆ. ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಆ ಕುರಿತು ಕೇಂದ್ರ ಪರಿಸರ‌ ಸಚಿವ ಭೂಪೇಂದ್ರ ಯಾದವ್ ಜೊತೆ ನಾನು ವೈಯಕ್ತಿಕವಾಗಿ ಚರ್ಚಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಸಚಿವರ ಜೊತೆ ಮಾತನಾಡಿದ್ದಾರೆ. ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.