ಬೆಂಗಳೂರು: ಚುನಾವಣೆಗಳಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್ ಪಕ್ಷ. ಅಂತಹ ಪಕ್ಷ ಈಗ ಚುನಾವಣಾ ಅಕ್ರಮದ ಬಗ್ಗೆ ಆರೋಪ ಮಾಡುತ್ತಿದೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು.
ಇಂದಿರಾಗಾಂಧಿ ಚುನಾವಣಾ ಅಕ್ರಮ ನಡೆಸಿದ್ದರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಹುಲ್‌ಗಾಂಧಿ ಆಗಸ್ಟ್ 5 ರಂದು ರಾಜ್ಯಕ್ಕೆ ಬರುವುದೇ ದೊಡ್ಡ ನಾಟಕ. ಇಲ್ಲಿ ಸರ್ಕಾರ ನಡೆಯುತ್ತಿಲ್ಲ. ಬದಲಿಗೆ ಮುಖ್ಯಮಂತ್ರಿ ಕುರ್ಚಿಗಾಗಿ ಕಲಹ ನಡೆಯುತ್ತಿದೆ. ಅದನ್ನು ಮರೆಮಾಚಲೆಂದೇ ಚುನಾವಣಾ ಅಕ್ರಮದ ವಿಷಯ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು.
ಚುನಾವಣೆ ನಡೆದಾಗ ನ್ಯಾಯಾಲಯದ ಮೊರೆ ಹೋಗದೆ, ಇಷ್ಟು ವರ್ಷವಾದ ಬಳಿಕ ಆರೋಪ ಮಾಡಲಾಗುತ್ತಿದೆ. ಲೋಕಸಭಾ ಚುನಾವಣೆ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುತ್ತಿತ್ತು. ಇಂತಹ ಅಧಿಕಾರಿಯೇ ಅಕ್ರಮ ಮಾಡಿದ್ದಾರೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಿ ಎಂದು ಆಗ್ರಹಿಸಿದರು.
‘ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್ ಪ್ರಕರಣವು ಸದನದಲ್ಲಿ ಗದ್ದಲ ಸೃಷ್ಟಿಸಿತು. ಈಗ ಆ ಘಟನೆ ನಡೆದೇ ಇಲ್ಲ ಎಂದು ಸರ್ಕಾರ ವರದಿ ನೀಡಿದೆ. ಸಚಿವರ ಮಾತಿಗೆ ಬೆಲೆ ಇಲ್ಲವಾಗಿದೆ. ಸಚಿವರು ಏನೇ ಮಾತನಾಡಿದರೂ ಅದು ಸರ್ಕಾರದ ಮಾತಾಗುತ್ತದೆ. ಅಂತಹವರ ಹೇಳಿಕೆಯನ್ನು ವಾಷಿಂಗ್ ಮೆಷಿನ್‌ಗೆ ಹಾಕಿ ಸ್ವಚ್ಛ ಮಾಡಲಾಗಿದೆ. ಪೊಲೀಸರ ಮೇಲೆ ಯಾರ ಒತ್ತಡವಿದೆ ಎಂದು ಗೊತ್ತಾಗಿಲ್ಲ. ಅವ್ಯವಹಾರಗಳನ್ನು ಈ ಸರ್ಕಾರ ಮುಚ್ಚಿ ಹಾಕುತ್ತದೆ. ಸಚಿವರಿಗೇ ನ್ಯಾಯ ಸಿಕ್ಕಿಲ್ಲ ಎಂದಾದರೆ ಬಡ ಜನರ ಪಾಡೇನು’ ಎಂದು ಅವರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.