
ಕಾಂಗ್ರೆಸ್
ನವದೆಹಲಿ: ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೆ ಸುಮಾರು 36 ಗಂಟೆಗಳಷ್ಟೇ ಉಳಿದಿರುವ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರದ ನಾಯಕತ್ವ ವಿಷಯದ ಬಗ್ಗೆ ಸಮಾಲೋಚಿಸಿರುವುದು ‘ಕೈ’ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಧಿಕಾರ ಹಂಚಿಕೆಯ ವಿಷಯದಲ್ಲಿ ತಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉಪಾಹಾರ ಕೂಟದ ಮೂಲಕ ಬಿಂಬಿಸಿದ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ತಣ್ಣಗಾಗಿತ್ತು.
ಹರಿಯಾಣದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ರಾತ್ರಿ ದೆಹಲಿಗೆ ಬಂದಿದ್ದ ಡಿ.ಕೆ. ಶಿವಕುಮಾರ್, ‘ನಾನು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದಿಲ್ಲ. ಅವರನ್ನು ಮುಜುಗರಕ್ಕೆ ಸಿಲುಕಿಸಲು ಇಷ್ಟಪಡುವುದಿಲ್ಲ’ ಎಂದು ಹೇಳಿದ್ದರು. ಅದಾದ ಮೂರು ದಿನಗಳ ಬಳಿಕ ಕಾಂಗ್ರೆಸ್ ವರಿಷ್ಠರು ಸಭೆ ಸೇರಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿರುವುದು ಕುತೂಹಲ ಮೂಡಿಸಿದೆ. ಸಂಸತ್‌ನ ಚಳಿಗಾಲದ ಅಧಿವೇಶನದ ಮುಗಿದ ಬಳಿಕವಷ್ಟೇ ಕಾಂಗ್ರೆಸ್ ವರಿಷ್ಠರು ಇನ್ನೊಂದು ಸುತ್ತಿನ ಸಭೆ ನಡೆಸುವ ಸಂಭವ ಇದೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಭಾಗಿಯಾಗಿದ್ದರು. ಕರ್ನಾಟಕ ‘ಕೈ’ ಸರ್ಕಾರದ ನಾಯಕತ್ವ ಬಿಕ್ಕಟ್ಟಿನ ಕುರಿತ ಚರ್ಚೆಯಲ್ಲಿ ಸೋನಿಯಾ ಅವರು ಇದೇ ಮೊದಲ ಬಾರಿ ಭಾಗವಹಿಸಿದ್ದಾರೆ. ಅವರು ಕೆಲವು ಸಮಯದಿಂದ ಅಂತಹ ರಾಜಕೀಯ ಚರ್ಚೆಗಳಿಂದ ದೂರವಿದ್ದಾರೆ.
ಕರ್ನಾಟಕದ ಕುರ್ಚಿ ಕಾದಾಟದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ಆಗಿದೆ. ಎರಡು ಬಣಗಳು ನಡೆಸಿದ ಚಟುವಟಿಕೆಗಳ ಬಗ್ಗೆ ಸೋನಿಯಾ ಗಾಂಧಿ ಮಾಹಿತಿ ಪಡೆದರು. ಉಪಾಹಾರ ಕೂಟ ನಡೆಸುವ ಮೂಲಕ ಉಭಯ ನಾಯಕರ ನಡುವಿನ ಗೊಂದಲ ಬಗೆಹರಿಸಿದ್ದು, ರಾಜ್ಯದ ವಿದ್ಯಮಾನಗಳ ಬಗ್ಗೆ ಆತಂಕ ಪಡಬೇಕಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದರು. ನಾಯಕತ್ವ ವಿಷಯದ ಕುರಿತ ಭಿನ್ನಮತ ಬಗೆಹರಿಸುವ ಬಗ್ಗೆ ಇನ್ನೊಂದು ಸುತ್ತಿನ ಸಭೆ ನಡೆಸಿ ಸಮಾಲೋಚಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ನಾಯಕತ್ವ ನಿರ್ಧಾರ ತೆಗೆದುಕೊಳ್ಳುವವರೆಗೆ ‘ಅಧಿಕಾರ ಹಸ್ತಾಂತರ’ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಎರಡೂ ಬಣಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಗೊತ್ತಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ದೆಹಲಿಗೆ ಬುಲಾವ್ ನೀಡುವ ಬಗ್ಗೆ ಪ್ರತಿಕ್ರಿಯಿಸಲು ವೇಣುಗೋಪಾಲ್ ನಿರಾಕರಿಸಿದರು.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ‘ಅಧಿಕಾರ ಹಂಚಿಕೆಯ ಸೂತ್ರ’ದ ವಿಷಯ ಮುನ್ನೆಲೆಗೆ ಬಂದಿತ್ತು. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ಉಭಯ ನಾಯಕರ ಹೇಳಿಕೆಗಳು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದ್ದವು. ರಾಜ್ಯ ಕಾಂಗ್ರೆಸ್‌ನ ಆಂತರಿಕ ಸಂಘರ್ಷ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. 15 ದಿನಗಳ ಬಳಿಕ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಿ ಉಪಾಹಾರ ಕೂಟದ ಮೂಲಕ ಭಿನ್ನಮತ ಇತ್ಯರ್ಥಪಡಿಸಿಕೊಳ್ಳುವಂತೆ ಇಬ್ಬರು ನಾಯಕರಿಗೂ ಸೂಚಿಸಿತ್ತು. ಉಪಾಹಾರ ಕೂಟದ ಮೂಲಕ ಇಬ್ಬರೂ ಒಗ್ಗಟ್ಟಿನ ಮಂತ್ರ ಪಠಿಸಿದ್ದರು. ‘ನಾವು ಸಹೋದರರು ಇದ್ದಂತೆ. ಹೈಕಮಾಂಡ್ ಸೂಚನೆ ಪಾಲಿಸುತ್ತೇವೆ‘ ಎಂದೂ ಹೇಳಿಕೆ ನೀಡಿದ್ದರು. ಸೋನಿಯಾ ಹಾಗೂ ರಾಹುಲ್ ಜತೆಗೆ ಸಮಾಲೋಚಿಸಿ ನಾಯಕತ್ವ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಖರ್ಗೆ ಸ್ಪಷ್ಟಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.