
ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದ ಮೇಲೆ ಎಲ್ಲರೂ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಏಕೆ ಭೇಟಿಯಾಗುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಪ್ರಶ್ನಿಸಿದರು.
ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಇದೇ ನವೆಂಬರ್‌ನಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ನಾನು ಹೇಳಿದ್ದೆ. ಆ ರೀತಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಲೇ ಇದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತವರ ಸಹೋದರ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್‌ನಲ್ಲಿ ‘ಮ್ಯೂಸಿಕಲ್ ಚೇರ್’ ಸ್ಪರ್ಧೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ಶಿವಕುಮಾರ್‌ಗೆ ಸಿಗುವುದು ಪಂಗನಾಮವಷ್ಟೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದ್ದೂ ವ್ಯರ್ಥವಾಗಲಿದೆ’ ಎಂದು ಟೀಕಿಸಿದರು.
‘ಕಬ್ಬು ಬೆಳೆಗಾರರ ಸಮಸ್ಯೆ, ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ ವಿತರಣೆ ವಿಳಂಬ, ವನ್ಯಜೀವಿ-ಮಾನವ ಸಂಘರ್ಷದಂತಹ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಕಾನೂನು ಸುವ್ಯವಸ್ಥೆ ಕುಸಿದಿದೆ. ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಶಾಸಕರಿಗೆ ಕುರ್ಚಿ ಕಿತ್ತಾಟವೇ ಪ್ರಧಾನವಾಗಿದೆ’ ಎಂದು ದೂರಿದರು.
‘ಪುಟಗಟ್ಟಲೆ ಭಾಷಣ ಮಾಡುವ ಸಿದ್ದರಾಮಯ್ಯ ಜಿಎಸ್‌ಟಿ ಸಮಿತಿಯ ಸಭೆಗೂ ಹೋಗದೆ, ಸಲಹೆ ನೀಡದೆ ಬರೀ ಆರೋಪ ಮಾಡುತ್ತಾರೆ. ಇರುವ ಅವಕಾಶಗಳನ್ನು ಬಳಸಿಕೊಳ್ಳದೆ ಸುಮ್ಮನೆ ಮಾತಾಡುತ್ತಾರೆ. ಕೇಂದ್ರಕ್ಕೆ ಮನವಿ ಮಾಡಿ ಬಂದ ತಕ್ಷಣವೇ ನಾಟಕವಾಡುತ್ತಿದ್ದಾರೆ. ವಂಚನೆಯಾಗಿದೆ ಎಂದು ಆರೋಪ ಹೊರೆಸುತ್ತಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.