ADVERTISEMENT

ಕಾಂಗ್ರೆಸ್‌–ಜೆಡಿಎಸ್‌: ಕೂಸು ಹುಟ್ಟುವ ಮುನ್ನವೇ ಕುಲಾವಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 18:59 IST
Last Updated 20 ಜುಲೈ 2022, 18:59 IST
ಡಿ.ಕೆ.ಶಿವಕುಮಾರ ಮತ್ತು ಎಚ್‌.ಡಿ.ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ ಮತ್ತು ಎಚ್‌.ಡಿ.ಕುಮಾರಸ್ವಾಮಿ   

ರಾಮನಗರ: ಕರಗ ಮಹೋತ್ಸವ ಅಂಗವಾಗಿ ಮಂಗಳವಾರ ತಡರಾತ್ರಿ ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ ಜಿಲ್ಲೆಯ ಇಬ್ಬರುಪ್ರಭಾವಿ ರಾಜಕೀಯ ನಾಯಕರ‘ಮುಖ್ಯಮಂತ್ರಿ’ಕನವರಿಕೆ ಸುದ್ದಿಇದೀಗ ಚರ್ಚೆಗೆ ಗ್ರಾಸವಾಗಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ರಾತ್ರಿ 11.30ರ ಸುಮಾರಿಗೆ ಮಾತನಾಡಿದ ಕುಮಾರಸ್ವಾಮಿ ‘ಈಗ ನಾಡಿನಲ್ಲಿ ಮುಖ್ಯಮಂತ್ರಿಯಾಗಲು ಬಹಳ ಮಂದಿ ಸ್ಪರ್ಧೆಯಲ್ಲಿದ್ದಾರೆ. ಆದರೆ ಜನತೆ ಅಂತಹವರನ್ನು ಬೆಂಬಲಿಸದೆ ನನಗೆ ಮತ್ತೆ ಆಶೀರ್ವಾದ ನೀಡಬೇಕು’ ಎಂದು ಕೋರಿದರು. ‘ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರೂ ಆ ನೋವು ಮರೆತು ಪಕ್ಷ ಸಂಘಟನೆ ಮಾಡುತ್ತಿದ್ದೇನೆ’ ಎಂದೂ ಅಳಲು ತೋಡಿಕೊಂಡರು.

ಅತ್ತ ನಗರದ ಅರಳೀಮರ ವೃತ್ತದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಡರಾತ್ರಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಈ ಹಿಂದೆ ಇಲ್ಲಿನ ಜನರು ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಅವಕಾಶ ನೀಡಿದ್ದೀರಿ. ಈಗ ನನಗೂ ಒಂದು ಅವಕಾಶ ಕೊಡಿ. ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿಕೊಂಡರು.

ADVERTISEMENT

ಕಾಂಗ್ರೆಸ್‌ ಕಾರ್ಯಕರ್ತರು ಹಾರ ಹಾಕಲು ಬಂದಾಗ ಅದನ್ನು ತಡೆದ ಡಿಕೆಶಿ ‘ನನಗೆ ಹೂವಿನ ಹಾರ ಬೇಡ. ನಾನು ಇಲ್ಲಿ ನಿಲ್ಲಿಸುವ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿಕೊಡಿ. ಅದೇ ನನಗೆ ಹೂವಿನ ಹಾರ' ಎಂದು ಹೇಳಿದರು.

ಬೆಂಗಳೂರು: ‘ದಲಿತರೆಲ್ಲರೂ ಒಟ್ಟಾಗಿ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುತ್ತಾರೆ. ಅದೇ ರೀತಿ ನಮ್ಮ ಸಮುದಾಯದವರೂ ಒಂದಾಗಲಿ ಎಂದು ನಾನು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಸೋನಿಯಾ ಗಾಂಧಿ ಅವರು ನನ್ನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. 20 ವರ್ಷಗಳ ನಂತರ ಈ ಸಮುದಾಯದವರಿಗೆ ಉನ್ನತ ಜವಾಬ್ದಾರಿ ನೀಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಿದ್ದೀರಿ, ನನಗೂ ಒಂದು ಅವಕಾಶ ನೀಡಿ ಎಂದು ಸಮುದಾಯದವರಲ್ಲಿ ಕೇಳಿದ್ದೇನೆ’ ಎಂದರು.

ಒಕ್ಕಲಿಗರ ಬೆಂಬಲ ಕೇಳುವುದರಲ್ಲಿ ತಪ್ಪೇನಿದೆ: ಡಿಕೆಶಿ

‘ಒಕ್ಕಲಿಗ ಸಮಾಜಕ್ಕೆ ಶಿವಕುಮಾರ್ ಕೊಡುಗೆ ಏನು’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಕುಮಾರಸ್ವಾಮಿಗೆ ಉತ್ತರಿಸಬೇಕಿಲ್ಲ. ಜನರಿಗೆ ಉತ್ತರ ನೀಡುವ ಜವಾಬ್ದಾರಿ ಇದೆ. ಜನ ನನ್ನನ್ನು ಸುಮ್ಮನೆ ಏಳು ಬಾರಿ ಗೆಲ್ಲಿಸಿದ್ದಾರಾ? ಕುಮಾರಸ್ವಾಮಿ ಅವರ ಪತ್ನಿ ವಿರುದ್ಧ ನನ್ನ ತಮ್ಮನ ನಿಲ್ಲಿಸಿದ್ದೆ. ಎರಡೂ ಪಕ್ಷ ಆಗ ಒಂದಾಗಿತ್ತಲ್ಲ. ಅವರು ಸಂಸದರಾಗಿದ್ದಾಗ ನನ್ನ ವಿರುದ್ಧ ಸ್ಪರ್ಧಿಸಿದ್ದರು. ನಾನು ಕೊಡುಗೆ ನೀಡಿದ್ದಕ್ಕೆ, ಅವರಿಗಿಂತ ಉತ್ತಮ ಎಂಬ ಕಾರಣಕ್ಕೆ ಜನರು ನನ್ನನ್ನು ಗೆಲ್ಲಿಸಿದ್ದು’ ಎಂದರು.

ಜಾತಿ ಆಧಾರದಲ್ಲಿ ಸಿಎಂ ಸ್ಥಾನ ಬಯಸುವವರು ಜಾತಿ ಸಂಘಟನೆ ಕಟ್ಟಲಿ:ಹರಿಪ್ರಸಾದ್‌

ಮಂಗಳೂರು: ‘ಕಾಂಗ್ರೆಸ್‌ ಪಕ್ಷವು ಯಾವುದೇ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಜಾತಿ ಆಧಾರದಲ್ಲಿ ಮುಖ್ಯಮಂತ್ರಿ ಆಗಬಯಸುವವರು ತಮ್ಮ ಜಾತಿ ಸಂಘಟನೆ ಕಟ್ಟಿ, ಅದರ ಮೂಲಕವೇ ಆಸೆ ತೀರಿಸಿಕೊಳ್ಳಲಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಲ ಜಾತಿ –ಧರ್ಮಗಳ ನಾಯಕರಿಗೂ ಅಧಿಕಾರದ ಕನಸು ಇದ್ದೇ ಇರುತ್ತದೆ. ಜಾತಿ– ಧರ್ಮದ ಹೆಸರಿನಲ್ಲಿ ಕಾಂಗ್ರೆಸ್‌ ಯಾವತ್ತೂ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್‌ಗೆ ಬಹುಮತ ಬಂದರೆ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಪಕ್ಷದ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಯಾರಾಗಬೇಕು ಎಂಬ ತೀರ್ಮಾನ ಮಾಡುತ್ತಾರೆ’ ಎಂದು ಅವರು ಹೇಳಿದರು.

ಯಾರ‍್ಯಾರೋ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ: ಡಾ.ಎಚ್‌.ಸಿ.ಮಹದೇವಪ್ಪ

ಮೈಸೂರು: ‘ಯಾರ‍್ಯಾರೋ ಮುಖ್ಯಮಂತ್ರಿ ಹುದ್ದೆ ಕೇಳುತ್ತಿದ್ದಾರೆ. ಆ ಹುದ್ದೆ ಎಂದರೆ ಎಲ್ಲರಿಗೂ ಹಗುರವಾಗಿ ಹೋಗಿದೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ಅವರು, ‘ಆ ಹುದ್ದೆಯ ಗೌರವ ಬೇರೆಯೇ ಇದೆ. ಹೋರಾಟ, ಸಾಮಾಜಿಕ ಬದ್ಧತೆ, ರಾಜಕೀಯ ಜೀವನದ ಅನುಭವ ಎಲ್ಲವೂ ಬೇಕು’ ಎಂದರು.

‘ಪಕ್ಷ ಅವಕಾಶ ನೀಡಿದರೆ ಜವಾಬ್ದಾರಿ ನಿರ್ವಹಿಸಲು ನಾನೂ ಸಿದ್ಧವಿದ್ದೇನೆ. ಲೋಕೋಪಯೋಗಿ, ಆರೋಗ್ಯ ಖಾತೆ ಸೇರಿದಂತೆ ಹಲವು ಜವಾಬ್ದಾರಿ ನಿರ್ವಹಿಸಿದ್ದೇನೆ. ಸಾಕಷ್ಟು ಅನುಭವವಿದೆ. ಅವಕಾಶ ಸಿಕ್ಕರೆ ನಿಭಾಯಿಸುತ್ತೇನೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ವಿಫಲ’

‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಕ್ಕೆ ಪಾಪ ಬಹಳ ವರ್ಷಗಳಿಂದ ‌ಒದ್ದಾಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗಿ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದಾರೆ. ಮೊದಲು ಅವರ ತಟ್ಟೆಯಲ್ಲಿ ಏನಿದೆ ಎಂಬುದನ್ನು ನೋಡಿಕೊಳ್ಳಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

***

‘ನಾನೂ ಒಕ್ಕಲಿಗ ಜಾತಿಯವನೇ. ಕೆಲವರು ಜಾತಿ ಹೆಸರಿನಲ್ಲಿ ಕುಟುಂಬವನ್ನು ಬಲಪಡಿಸಿಕೊಳ್ಳುತ್ತಿದ್ದು, ನಾವು ಅಂತಹ ಕೆಲಸ ಮಾಡುವುದಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ. ಬುಧವಾರ ರಾತ್ರಿ ರಾಮನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿ ‘ಒಂದು ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡಿ ಗೆಲ್ಲಲು ಸಾಧ್ಯವಿಲ್ಲ’ ಎಂದರು.

–ಸಿ.ಟಿ.ರವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.