ADVERTISEMENT

ಭಿನ್ನಾಭಿಪ್ರಾಯವಿಲ್ಲ, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 7:51 IST
Last Updated 16 ಮಾರ್ಚ್ 2020, 7:51 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಮತ್ತು ಈಶ್ವರ ಖಂಡ್ರೆ ಅವರ ಸಮಾಗಮ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಮತ್ತು ಈಶ್ವರ ಖಂಡ್ರೆ ಅವರ ಸಮಾಗಮ.   

ಬೆಂಗಳೂರು: 'ನಾನು ಪಕ್ಷದ ಅಧ್ಯಕ್ಷನಾಗಬೇಕು ಎಂದು ಎಂ.ಬಿ ಪಾಟೀಲ ಸೇರಿದಂತೆ ಎಲ್ಲ ನಾಯಕರು ಸೂಚಿಸಿದ್ದಾರೆ. ಪಕ್ಷದ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ' ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಪಕ್ಷದ ಹಿರಿಯ ನಾಯಕ ಎಂ.ಬಿ. ಪಾಟೀಲ ಅವರನ್ನು ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಸೋಮವಾರ ಭೇಟಿ ಮಾಡಿದ ಬಳಿಕ ಮಾತನಾಡಿದ ಶಿವಕುಮಾರ್, 'ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಜ್ಯಕ್ಕೆ ವೀಕ್ಷಕರು ಬಂದಿದ್ದರು. ನನಗೆ ಗೊತ್ತಿಲ್ಲದೆ ಎಂ.ಬಿ ಪಾಟೀಲ ಸೇರಿದಂತೆ ಶೇ 99ರಷ್ಟು ಭಾಗದ ಬಹುತೇಕ ಎಲ್ಲರೂ ನಾನು ಅಧ್ಯಕ್ಷ ಆಗಬೇಕು ಎಂದು ಸೂಚಿಸಿದ್ದಾರೆ. ಇದು ಸತ್ಯ' ಎಂದರು.

'ಮಾಧ್ಯಮ ಸ್ನೇಹಿತರು ಏನೇನೋ ಸೃಷ್ಟಿ ಮಾಡಿದ್ದೀರಿ. ನಮ್ಮಲ್ಲಿ ಯಾವುದೇ ರೀತಿಯ ಸ್ಪರ್ಧೆ, ಭಿನ್ನಾಭಿಪ್ರಾಯ ಇರಲಿಲ್ಲ. ಪಾಪ, ನಿಮಗೆ ಯಾರೋ ಮಾಹಿತಿ ನೀಡಿದ್ದಾರೆ ಎಂದು ನೀವು ಸುದ್ದಿ ಮಾಡಿದ್ದೀರಿ. ಈ ಊಹಾಪೋಹಗಳಿಗೆ ಸೂಕ್ತ ಕಾಲದಲ್ಲಿ ತೆರೆ ಎಳೆಯಬೇಕು ಎಂಬುದು ನಮ್ಮ ಅಭಿಪ್ರಾಯ. ಹೀಗಾಗಿಯೇ ಇವತ್ತು ಈ ಬಗ್ಗೆ ಎಂ.ಬಿ. ಪಾಟೀಲರ ಜೊತೆಯಾಗಿ ಮಾತನಾಡುತ್ತಿದ್ದೇನೆ' ಎಂದರು.

ADVERTISEMENT

'ನಮ್ಮಲ್ಲಿ ಯಾವುದೇ ವ್ಯಕ್ತಿಗತ ವಿಚಾರವಿಲ್ಲ. ಸಿದ್ಧಾಂತದ ಆಧಾರದ ಮೇಲೆ ನಾವು ಪಕ್ಷದಲ್ಲಿ ಇದ್ದೇವೆ. ದಿನೇಶ್ ಅವರ ತಂದೆ ಇದ್ದಾಗ ನಾನು ಶಾಸಕನಾಗಿದ್ದೆ. ಆ ನಂತರ ಅವರು ಶಾಸಕರಾಗಿ ದೊಡ್ದ ಜವಾಬ್ದಾರಿ ಅಲಂಕರಿಸಿದ್ದಾರೆ' ಎಂದರು.

'ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಜನರ ಭಾವನೆಗೆ ತಕ್ಕಂತೆ ರಾಜ್ಯವನ್ನು ಅಭಿವೃದ್ಧಿಯತ್ತ ನಡೆಸುವುದು ನಮ್ಮ ಗುರಿ' ಎಂದೂ ಶಿವಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.