ADVERTISEMENT

ಬಿಜೆಪಿ ನಾಯಕರ ವಿರುದ್ಧ ಏಕೆ ಇ.ಡಿ ತನಿಖೆ ಇಲ್ಲ: ಡಿ.ಕೆ. ಶಿವಕುಮಾರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 10:05 IST
Last Updated 14 ಜೂನ್ 2022, 10:05 IST
   

ಬೆಂಗಳೂರು: ಬಿಜೆಪಿ ನಾಯಕರ ಮನೆಗಳಲ್ಲಿ ಅಪಾರ ಹಣ ಸಿಕ್ಕರೂ ಜಾರಿ ನಿರ್ದೇಶನಾಲಯ (ಇ.ಡಿ) ಏಕೆ ತನಿಖೆ ನಡೆಸುವುದಿಲ್ಲ? ಕಾಂಗ್ರೆಸ್ ನಾಯಕರಿಗೆ ಮಾತ್ರ ತನಿಖೆ ಹೆಸರಿನಲ್ಲಿ ಕಿರುಕುಳ ನೀಡುವುದು ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, 'ಬಿಜೆಪಿ ನಾಯಕರು ಮತ್ತು ಅವರ ಆಪ್ತರ ಮನೆಗಳಲ್ಲಿ ಎಷ್ಟೊಂದು ಬಾರಿ ದೊಡ್ಡ ಪ್ರಮಾಣದ ಹಣ ಪತ್ತೆಯಾಗಿತ್ತು. ಆ ಬಗ್ಗೆ ಯಾವತ್ತೂ ಇ.ಡಿ ತನಿಖೆಯನ್ನೇ ನಡೆಸದಿರುವುದಕ್ಕೆ ಕಾರಣವೇನು' ಎಂದು ಕೇಳಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವ ಅಕ್ರಮವೂ ನಡೆದಿಲ್ಲ.‌ ಜವಾಹರ ಲಾಲ್ ನೆಹರೂ, ಬಾಲ ಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಆರಂಭಿಸಿದ್ದ ಪತ್ರಿಕೆಯನ್ನು ಉಳಿಸಿಕೊಂಡು ಬರಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಟ್ರಸ್ಟಿಗಳಾದ ತಕ್ಷಣ ಪತ್ರಿಕೆಯ ಆಸ್ತಿ ವರ್ಗಾವಣೆ ಮಾಡಿಕೊಳ್ಳುತ್ತಾರೆಯೆ ಎಂದು ಪ್ರಶ್ನಿಸಿದರು.

ADVERTISEMENT

ರಾಹುಲ್ ಗಾಂಧಿ ಅವರನ್ನು ಹತ್ತು ಗಂಟೆಗಳ ಕಾಲ ವಿಚಾರಣೆ ನಡೆಸುವಂತಹ ವಿಷಯ ಏನಿದೆ? ವಿರೋಧ ಪಕ್ಷದವರು ಎಂಬ ಕಾರಣಕ್ಕೆ ತನಿಖೆ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದರು.

ನನ್ನನ್ನು ಇ.ಡಿ‌ ಅಧಿಕಾರಿಗಳು ಹತ್ತು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಆಗ ಏನೆಲ್ಲಾ ಕಿರುಕುಳ ಕೊಟ್ಟಿದ್ದರು ಎಂಬುದು ನನಗೆ ಮಾತ್ರ ಗೊತ್ತಿದೆ. ಆ ವಿಚಾರವನ್ನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದರು.

ಪ್ರತಿಭಟನೆ ಮಾಡಿದವರು ತಿಹಾರ್ ಜೈಲಿಗೆ ಹೋಗುತ್ತಾರೆ ಎಂಬ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, 'ಆತ ದೇಶದ ಮಹಾನ್ ಭ್ರಷ್ಟ ಶಿಕ್ಷಣ ಸಚಿವ. ಕುಲಪತಿ ನೇಮಕಕ್ಕೆ ಹಣ ಪಡೆಯುತ್ತಿದ್ದಾರೆ. ಬೇರೆ ಕೆಲಸಗಳಿಗೂ ಹಣ ಪಡೆಯುತ್ತಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮ ಬಯಲಾದ ಬಳಿಕ ಸುಮ್ಮನಾಗಿದ್ದಾರೆ. ಆ ಗಂಡಿನ ಬಗ್ಗೆ ಈಗ ಮಾತನಾಡುವುದಿಲ್ಲ.‌ ಮುಂದೆ ಮಾತನಾಡುವೆ' ಎಂದರು.

ಶಾಂತಿಯುತ ಪ್ರತಿಭಟನೆ ನಡೆಸಲು ಎಲ್ಲರಿಗೂ ಹಕ್ಕಿದೆ. ಪ್ರತಿಭಟನೆ ನಡೆಸದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.