ADVERTISEMENT

ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ: ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 16:18 IST
Last Updated 6 ಅಕ್ಟೋಬರ್ 2022, 16:18 IST
ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌
ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌   

ಬೆಂಗಳೂರು: ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ವ್ಯಂಗ್ಯವಾಡಿದ್ದಾರೆ.

ವಿವಿಧ ಪತ್ರಿಕೆಗಳಲ್ಲಿ ಬಿಜೆಪಿ ನೀಡಿರುವ ಜಾಹೀರಾತುಗಳ ಕುರಿತು ಸರಣಿ ಟ್ವೀಟ್ ಮಾಡಿರುವ ಗುಂಡೂರಾವ್‌, ಆ ಪಕ್ಷದ (ಬಿಜೆಪಿ) ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

'ಭಾರತ್ ಜೋಡೊ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟಿರುವ ಬಿಜೆಪಿಯವರು ದಿನಪತ್ರಿಕೆಗಳಲ್ಲಿ ಕಾಂಗ್ರೆಸ್‌ ನಾಯಕರ ತೇಜೋವಧೆ ಮಾಡುವ ಜಾಹೀರಾತು ನೀಡಿ ವಿಕೃತಿ ತೋರಿಸಿದ್ದಾರೆ. ಯಾತ್ರೆಯ ಯಶಸ್ಸಿನಿಂದ ಬಿಜೆಪಿಯವರು ಎಷ್ಟು ಹತಾಶರಾಗಿದ್ದಾರೆ ಎಂಬುದಕ್ಕೆ ಈ ಜಾಹೀರಾತುಗಳೇ ಸಾಕ್ಷಿ.ಬಿಜೆಪಿಯವರೇ ನೀವೆಷ್ಟೇ ಅಪಪ್ರಚಾರ ಮಾಡಿದರೂ ಸತ್ಯವನ್ನು ಸಮಾಧಿ ಮಾಡಲು ಸಾಧ್ಯವೇ?' ಎಂದು ಕೇಳಿದ್ದಾರೆ.

ADVERTISEMENT

ಮತ್ತೊಂದು ಟ್ವೀಟ್‌ನಲ್ಲಿ, 'ಮುಂಬೈ ದಾಳಿ ಸಂದರ್ಭದಲ್ಲಿ ರಾಹುಲ್‌ ಗಾಂಧಿಮಜಾ ಮಾಡುತ್ತಿದ್ದರು ಎಂದು ಬಿಜೆಪಿಯವರು ಜಾಹೀರಾತು ನೀಡಿದ್ದಾರೆ.ಪುಲ್ವಾಮ ದಾಳಿಯ ವೇಳೆ ನರೇಂದ್ರ ಮೋದಿಏನು ಮಾಡುತ್ತಿದ್ದರು ಎಂದು ಬಿಜೆಪಿ ಹೇಳಲಿ.ಪುಲ್ವಾಮ ದಾಳಿ ಸಮಯ ಮಧ್ಯಾಹ್ನ 3.15.ಈ ಭೀಕರ ದಾಳಿಯ ವಿಷಯ ತಿಳಿದರೂ ರಾತ್ರಿ 7.45ರವರೆಗೆ ಜಿಮ್ ಕಾರ್ಬೆಟ್ ಉದ್ಯಾನದಲ್ಲಿ ಫೋಟೊಶೂಟ್ ಮಾಡಿದ್ದು ಮಜಾ ಅಲ್ಲವೇ?' ಎಂದು ಸವಾಲು ಹಾಕಿದ್ದಾರೆ.

'ಸಿದ್ದರಾಮಯ್ಯ ಪಿಎಫ್‌ಐ ಮೇಲಿನ 175 ಕೇಸ್ ಹಿಂಪಡೆದಿದ್ದಾರೆ ಎಂದು ಬಿಜೆಪಿಯವರು ಸುಳ್ಳು ಜಾಹೀರಾತು ನೀಡಿದ್ದಾರೆ.ಈ ಬಗ್ಗೆ ಸಿದ್ದರಾಮಯ್ಯರೇ ಸರ್ಕಾರಕ್ಕೆ ಪತ್ರ ಬರೆದು ತಮ್ಮ ಅವಧಿಯಲ್ಲಿ ಪಿಎಫ್‌ಐ ವಿರುದ್ಧ ಎಷ್ಟು ಪ್ರಕರಣ ಹಿಂಪಡೆದಿರುವ ಬಗ್ಗೆ ಮಾಹಿತಿ ಕೇಳಿದ್ದಾರೆ.ಆದರೆ, ಸರ್ಕಾರ ಕೊಟ್ಟ ಉತ್ತರದಲ್ಲಿ ಈ ಬಗ್ಗೆ ಉಲ್ಲೇಖವೇ ಇಲ್ಲ.ಮತ್ಯಾಕೆ ಸುಳ್ಳು?' ಎಂದು ಪ್ರಶ್ನಿಸಿದ್ದಾರೆ.

'ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿರುವ ಬಿಜೆಪಿಯವರು ಹಸಿ ಸುಳ್ಳುಗಳ ಜಾಹೀರಾತು ನೀಡಿ ವಿಕಾರ ಕಾರಿಕೊಂಡಿದ್ದಾರೆ.ನಾವು ಬಿಜೆಪಿಯವರ ಲಂಚ-ಮಂಚ, ಕಮಿಷನ್ ದಂಧೆ ಬಗ್ಗೆ ಜಾಹೀರಾತು ನೀಡಿದರೆ ವರ್ಷಪೂರ್ತಿ ದಿನಪತ್ರಿಕೆಗಳ ಮುಖ‌ಪುಟ ತುಂಬಿಸಬಹುದು.ಆದರೆ, ಬಿಜೆಪಿ ಕೊಚ್ಚೆ ಇದ್ದಂತೆ.ಆ ಕೊಚ್ಚೆ ಮೇಲೆ ಕಲ್ಲು ಎಸೆಯುವುದಿಲ್ಲ' ಎಂದು ಛೇಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.