ADVERTISEMENT

ದುಂದು ವೆಚ್ಚದ ನಿಜಾಮ್‌ ಶೈಲಿ ಐಬಿಗಳು!

ಸರ್ಕಾರದ ದುಂದು ವೆಚ್ಚಕ್ಕೆ ಹಲವು ದಾರಿಗಳು: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 21:56 IST
Last Updated 17 ಮಾರ್ಚ್ 2022, 21:56 IST
ಕೃಷ್ಣಬೈರೇಗೌಡ
ಕೃಷ್ಣಬೈರೇಗೌಡ   

ಬೆಂಗಳೂರು: ‘ನಮ್ಮಲ್ಲಿ ಐಬಿ ಮತ್ತು ಸರ್ಕೀಟ್‌ ಹೌಸ್‌ಗಳು ಹೈದರಾಬಾದ್‌ ನಿಜಾಮ್‌ ಶೈಲಿಯದ್ದಾಗಿವೆ. ಇಲ್ಲಿರುವ ಬೆಡ್‌ರೂಮ್‌, ಬಾತ್ ರೂಂಗಳಲ್ಲಿನ ಐಷಾರಾಮಿತನವೇ ಸರ್ಕಾರದ ದುಂದು ವೆಚ್ಚಕ್ಕೆ ನಿದರ್ಶನಗಳು. ಸರ್ಕಾರಕ್ಕೆ ಮೈಮೇಲೆ ಎಚ್ಚರಿಕೆ ಇಲ್ಲದ ಕಾರಣ ಈ ರೀತಿ ಹಣ ಪೋಲಾಗುತ್ತಿದೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಹೇಳಿದರು.

ವಿಧಾನಸಭೆಯಲ್ಲಿ ಗುರುವಾರ ಇಲಾಖೆಗಳ ಮೇಲಿನ ಬೇಡಿಕೆಗಳ ಕುರಿತ ಚರ್ಚೆಯ ಆರಂಭಿಸಿದ ಅವರು ಬದ್ಧ ವೆಚ್ಚದಲ್ಲಿ ಉಳಿತಾಯ ಹೇಗೆ ಮಾಡಬೇಕು ಮತ್ತು ಎಲ್ಲೆಲ್ಲಿ ಅನಗತ್ಯ ಖರ್ಚುಗಳು ಆಗುತ್ತಿವೆ ಎಂಬುದನ್ನು ವಿವರಿಸಿದರು.

‘ಸರ್ಕೀಟ್‌ಹೌಸ್‌ಗಳು ಬೃಹತ್‌ ಬಂಗಲೆಗಳಾಗಿರುತ್ತವೆ. ಬಾತ್‌ ರೂಮ್‌ 30x40 ಅಷ್ಟು ವಿಶಾಲವಾಗಿರುತ್ತವೆ. ಒಂದು ಬೆಡ್‌ರೂಂಗೆ ಖರ್ಚು ಮಾಡುವ ಹಣದಲ್ಲಿ ಬಡವರಿಗೆ 10 ಮನೆಗಳನ್ನು ಕಟ್ಟಿಸಿಕೊಡಬಹುದು. ಇದು ನಿಜಾಮ್‌ ಜೀವನ ಶೈಲಿಯನ್ನು ನೆನಪಿಸುತ್ತವೆ. ಮೈಸೂರು ಮಹಾರಾಜರು ಆ ರೀತಿ ಐಷಾರಾಮಿ ಜೀವನ ನಡೆಸಿದವರಲ್ಲ. ಚಿಕ್ಕ ಮತ್ತು ಸರಳ ಪ್ರವಾಸಿ ಮಂದಿರಗಳನ್ನು ಕಟ್ಟಿಸುತ್ತಿದ್ದರು. ಜನರ ಪರವಾದ ಚಿಂತನೆ ಉಳ್ಳವರಾಗಿದ್ದರು’ ಎಂದರು.

ADVERTISEMENT

‘ಐಬಿ, ಸರ್ಕೀಟ್‌ ಹೌಸ್‌ಗಳಿಂದ ಗುತ್ತಿಗೆದಾರರಿಗೆ ಮಾತ್ರ ಅನುಕೂಲ. ಅದನ್ನು ಬಳಸುವ ಸಚಿವರ ಸಂಖ್ಯೆ ಶೇ 10 ಇರಬಹುದು. ಉಳಿದವರು ತಾರಾ ಹೊಟೇಲ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ನಾನು ಸಚಿವನಾಗಿದ್ದಾಗ ಐಬಿಗಳಲ್ಲೇ ವಾಸ್ತವ್ಯ ಹೂಡುತ್ತಿದ್ದೆ’ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಉಪಸಭಾಧ್ಯಕ್ಷ ಆನಂದ್ ಮಾಮನಿ, ಚಿತ್ರದುರ್ಗದ ಪ್ರವಾಸಿ ಮಂದಿರ ಕಾಂಪ್ಯಾಕ್ಟ್‌ ಆಗಿದೆ. ಅದನ್ನು ಮಾದರಿಯಾಗಿ ಪರಿಗಣಿಸಬಹುದು ಎಂದರು.

‘ರಾಜ್ಯದಲ್ಲಿ ಮೊದಲ ನಿಜಾಮ್‌ ಶೈಲಿಯ ಐಬಿ ಆರಂಭಿಸಿದ್ದು ಇಕ್ಬಾಲ್‌ ಅನ್ಸಾರಿ (ಮಾಜಿ ಸಚಿವ). ಆ ಬಳಿಕ ಎಲ್ಲ ಕಡೆಗೂ ಆ ಚಾಳಿ ಹಬ್ಬಿತು’ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ, ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಪ್ರವಾಸಿ ಮಂದಿರಗಳನ್ನು ಕಟ್ಟಿಸಲು ಪ್ರಸ್ತಾವನೆ ತರುತ್ತಿದ್ದಾರೆ. ಗದಗದಲ್ಲಿರುವ ಐಬಿಯ ಕಸ ಗುಡಿಸಲು 10–15 ಜನ ಬೇಕು. ಹುಬ್ಬಳ್ಳಿಯಲ್ಲಿ ಬಾತ್‌ರೂಗೆ ಒಂದು ಕಿ.ಮೀ ವಾಕ್‌ ಮಾಡಬೇಕು ಎಂದು ಹಾಸ್ಯ ಮಾಡಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಜೆಡಿಎಸ್‌ನ ಡಾ.ಅನ್ನದಾನಿ, ‘ನನಗೆ ಊರಲ್ಲೂ ಮನೆಯಿಲ್ಲ ಮಳವಳ್ಳಿಯಲ್ಲೂ ಮನೆ ಇಲ್ಲ. ಚಿಕ್ಕ ಐಬಿಯಲ್ಲೇ ಕುಳಿತು ಶಾಸಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಸಭಾಧ್ಯಕ್ಷ ಆನಂದ ಮಾಮನಿ, ‘ಶಾಸಕರೇ ಅಸಹಾಯಕತೆ ವ್ಯಕ್ತಪಡಿಸಿದರೆ, ಮತದಾರರ ಕಥೆ ಏನು’ ಎಂದು ಪ್ರಶ್ನಿಸಿದರು.

‘ವಿಶ್ವವಿದ್ಯಾಲಯಗಳು ಪಿಡಬ್ಲ್ಯೂಡಿ (ಲೋಕೋಪಯೋಗಿ ಇಲಾಖೆ) ಆಗಿವೆ. ಅಲ್ಲಿ ಶೈಕ್ಷಣಿಕ ವಿಚಾರಕ್ಕಿಂತ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ಹೆಚ್ಚಾಗಿದೆ. ಎಷ್ಟೊಂದು ವಿ.ವಿ ಘೋಷಿಸಿದ್ದೀರಿ. ಹಣ ಎಲ್ಲಿಂದ ತರುತ್ತೀರಿ ಎಂದು ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

‘ಸಿರಿಧಾನ್ಯ ವರ್ಷಕ್ಕೆ ಸೂಕ್ತ ಯೋಜನೆ’
‘2023 ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂದು ವಿಶ್ವಸಂಸ್ಥೆ ಘೋಷಿಸಿದೆ. ಆಗ ಕರ್ನಾಟಕದ ಸಿರಿಧಾನ್ಯಗಳನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಸೂಕ್ತ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸಂಬಂಧ ಇಲ್ಲ ಎಂಬಂತೆ ಸರ್ಕಾರ ಕುಳಿತರೆ, ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

‘ಕರ್ನಾಟಕ ಸರ್ಕಾರದ ನಿರಂತರ ಪ್ರಯತ್ನವೂ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲು ಕಾರಣ. ನಾನು ಕೃಷಿ ಮಂತ್ರಿ ಆಗಿದ್ದಾಗ, ಕೇಂದ್ರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ವಾಣಿಜ್ಯ ಸಚಿವರಾಗಿದ್ದರು. ಅವರು ಇದಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದರು. ರಾಜ್ಯ ಸರ್ಕಾರ ಕಾರ್ಯಕ್ರಮ ರೂಪಿಸಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಿರಿಧಾನ್ಯ ಪರಿಚಯಿಸಲು ಕೇಂದ್ರಕ್ಕೆ ಮನವಿ ಮಾಡಬೇಕು’ ಎಂದು ಸಲಹೆ ನೀಡಿದರು.

'ತೆರಿಗೆಗಳ ಬದಲಿಗೆ ಸೆಸ್‌ ಹೆಚ್ಚಳ; ರಾಜ್ಯಗಳಿಗೆ ಅನ್ಯಾಯ'
‘ಕೇಂದ್ರ ಸರ್ಕಾರ ತೆರಿಗೆಗಳ ಬದಲಿಗೆ ಸೆಸ್‌ ಹೆಚ್ಚಳ ಮಾಡುತ್ತಿದೆ. ಇದರಿಂದ ರಾಜ್ಯಗಳಿಗೆ ಅನ್ಯಾಯ ಆಗುತ್ತಿದೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಆರೋಪಿಸಿದರು.

‘15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುವ ತೆರಿಗೆ ಆದಾಯದಲ್ಲಿ ಶೇಕಡ 59ರಷ್ಟು ಕೇಂದ್ರಕ್ಕೆ ಮತ್ತು ಶೇ 41ರಷ್ಟು ರಾಜ್ಯಗಳಿಗೆ ಹಂಚಿಕೆ ಆಗಬೇಕು. ತೆರಿಗೆ ವರಮಾನವನ್ನು ಸೆಸ್‌ ಆಗಿ ಪರಿವರ್ತಿಸಿರುವ ಕಾರಣದಿಂದ ರಾಜ್ಯಗಳು ಹಕ್ಕು ಕಳೆದುಕೊಂಡಿವೆ’ ಎಂದರು.

2015ರ ನಂತರ ಕಾರ್ಪೋರೇಟ್‌ ತೆರಿಗೆ ಹೆಚ್ಚಳ ಕಡಿಮೆಯಾಗಿದೆ. ಜಿಎಸ್‌ಟಿ ಮತ್ತು ಆದಾಯ ತೆರಿಗೆ ಹೆಚ್ದಿದೆ. ಬಡವರು ಹೆಚ್ಚು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಅಂಬಾನಿ, ಅದಾನಿ ಅವರಂತಹ ಕಾರ್ಪೋರೇಟ್‌ ಬಲಾಢ್ಯರು ದಿನ್ನಕ್ಕೆ ನೂರಾರು ಕೋಟಿ ರೂಪಾಯಿ ಸಂಪಾದಿಸುತ್ತಿದ್ದಾರೆ ಎಂದು ಹೇಳಿದರು.

‘ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ ಮತ್ತು ಕೇಂದ್ರದ ಅನುದಾನಗಳಲ್ಲಿ ಒಟ್ಟು ₹ 45,000 ಕೋಟಿ ಖೋತಾ ಆಗಲಿದೆ. ಐಷಾರಾಮಿ ವಸ್ತುಗಳು ಮತ್ತು ಆರೋಗ್ಯಕ್ಕೆ ಹಾನಿಕರವಾದ ವಸ್ತುಗಳಿಗೆ ವಿಧಿಸುವ ಸೆಸ್‌ನಿಂದ ಜಿಎಸ್‌ಟಿ ಪರಿಹಾರ ನೀಡಲಾಗುತ್ತಿದೆ. ಈ ಸೆಸ್‌ ಸಂಗ್ರಹ ನಿಲ್ಲುವುದಿಲ್ಲ. ಆದ್ದರಿಂದ ಜಿಎಸ್‌ಟಿ ಪರಿಹಾರ ಮುಂದುವರಿಸಲು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.