ADVERTISEMENT

ಸರ್ಕಾರಕ್ಕೆ ಹುಳುಕು ಮುಚ್ಚಿಕೊಳ್ಳುವ ತುರ್ತು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 20 ಮೇ 2021, 19:31 IST
Last Updated 20 ಮೇ 2021, 19:31 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ನಾನು ಯಾವುದೇ ಆದೇಶ ಕೊಡಲು ಜಿಲ್ಲಾಧಿಕಾರಿಗಳ ಸಭೆ ಕರೆದಿಲ್ಲ. ಅವರು (ಸರ್ಕಾರ) ಹುಳುಕು ಮುಚ್ಚಿಕೊಳ್ಳಲು ಅವಕಾಶ ನಿರಾಕರಿಸಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋವಿಡ್‌ ಅನ್ನು ಯಾವ ಜಿಲ್ಲೆಯಲ್ಲೂ ಸರ್ಕಾರ ಸಮರ್ಥವಾಗಿ ನಿಭಾಯಿಸಿಲ್ಲ. ನಾನು ಸಭೆ ನಡೆಸಿದರೆ ಎಲ್ಲಾ ಗೊತ್ತಾಗಿ ಬಿಡಬಹುದು ಎಂಬ ಭಯ ಅವರಿಗೆ. ಚಾಮರಾಜನಗರಕ್ಕೆ ನಾನು ಮತ್ತು ಡಿ.ಕೆ. ಶಿವಕುಮಾರ್‌ ಹೋಗದೆ ಇದ್ದಿದ್ದರೆ ಅಲ್ಲಿ ಸತ್ತವರ ಸಂಖ್ಯೆ ಹೊರಗೇ ಬರುತ್ತಿರಲಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಸಿದ್ದರಾಮಯ್ಯ ಅವರು ಕೇವಲ ಸಿದ್ದರಾಮಯ್ಯ ಅಲ್ಲ. ಅವರು ವಿರೋಧ ಪಕ್ಷದ ನಾಯಕ. ಅದು ಸಾಂವಿಧಾನಿಕ ಹುದ್ದೆ. ಅದಕ್ಕೆ ಗೌರವ ಇಲ್ಲವೇ. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕ ಆಗಿದ್ದಾಗ ಜಿಲ್ಲಾಧಿಕಾರಿಗಳ ಸಭೆ ಮಾಡುತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು.

ಸಿಎಂಗೆ ಮತ್ತೆ ಪತ್ರ: ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಝೂಮ್‌ ತಂತ್ರಾಂಶದ ಮೂಲಕ ಸಭೆ ನಡೆಸಲು ಅವಕಾಶ ನೀಡದ ಬಗ್ಗೆ ಮುಖ್ಯಮಂತ್ರಿಗೆ ಗುರುವಾರ ಮತ್ತೆ ಪತ್ರ ಬರೆದಿರುವ ಸಿದ್ದರಾಮಯ್ಯ, ‘ಹಿಂದೆ ಸುತ್ತೋಲೆಗಳನ್ನು ಹೊರಡಿಸಿದಾಗ ತಂತ್ರಜ್ಞಾನ ಸಂಬಂಧಿ ಅನುಕೂಲಗಳು ಇರಲಿಲ್ಲ. ಹೀಗಾಗಿ ಸಭೆ ಕರೆದು ಮಾಹಿತಿಪಡೆಯಬೇಕಾಗಿತ್ತು. ಆದರೆ, ಝೂಮ್, ಗೂಗಲ್ ಮುಂತಾದ ಆ್ಯಪ್‌ಗಳ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಅಧಿಕಾರಿಗಳ ಕಾರ್ಯವೈಖರಿಗಳ ಕುರಿತು ಪರಿಶೀಲನೆ ನಡೆಸಲು, ನಿರ್ದೇಶನನೀಡುವ ಉದ್ದೇಶವಿಲ್ಲ. ಅಷ್ಟರಮಟ್ಟಿಗಿನ ಸಾಂವಿಧಾನಿಕ ಅರಿವಿದೆ. ಕೇವಲ ಮಾಹಿತಿ ಪಡೆಯುವುದಷ್ಟೆ ನನ್ನ ಉದ್ದೇಶ. ಎರಡು ವರ್ಷಗಳಿಂದ ನಾನು ಕೇಳಿರುವ ಮಾಹಿತಿಯ ಬದಲು ಅಧಿಕಾರಿಗಳು ಬೇರೆ ಮಾಹಿತಿ ನೀಡಿದ್ದಾರೆ. ಈ ಗೊಂದಲಗಳಿಗೆ ಅವಕಾಶ ನೀಡಬಾರದೆಂಬ ಕಾರಣದಿಂದ ನೇರವಾಗಿ ಮಾಹಿತಿ ಪಡೆಯಲು ಉದ್ದೇಶಿಸಿದ್ದೇನೆ. ಅಧಿಕಾರಿಗಳಿಗೆ ನಿರ್ದೇಶನ ನೀಡಿ ಝೂಮ್ ಮೂಲಕ ಹಾಜರಾಗಿ ಮಾಹಿತಿ ನೀಡಲು ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

‘ವಿರೋಧ ಪಕ್ಷಗಳ ಕಾರ್ಯನಿರ್ವಹಣೆಗೆ ಅಡ್ಡಿ’

‘ಕೊರೊನಾ ನೆಪ ಮುಂದಿಟ್ಟು ವಿರೋಧ ಪಕ್ಷಗಳ ಕಾರ್ಯನಿರ್ವಹಣೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಬಿ.ಎಲ್. ಶಂಕರ್ ಮಾತನಾಡಿ, ‘ವಿರೋಧ ಪಕ್ಷದ ನಾಯಕ ಅಂದರೆ, ಮುಖ್ಯಮಂತ್ರಿಯ ನೆರಳಿದ್ದಂತೆ. ಸರ್ಕಾರದಲ್ಲಿ ಆಗುತ್ತಿರುವ ಲೋಪ ಎತ್ತಿ ಹಿಡಿಯಲು ಅವಕಾಶ ಇದೆ’ ಎಂದರು.

ರಮೇಶ್ ಬಾಬು ಮಾತನಾಡಿ, ‘ಪರಿಸ್ಥಿತಿ ನಿಭಾಯಿಸಲು ಸಾಧ್ಯ ಆಗದಿದ್ದರೆ ಅಧಿಕಾರ ಬಿಟ್ಟು ಹೋಗಿ. ವಿರೋಧ ಪಕ್ಷದ ನಾಯಕನನ್ನು ಯಾಕೆ ಕಟ್ಟಿ ಹಾಕುತ್ತೀರಿ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.