ADVERTISEMENT

ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಖಂಡನೀಯ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2022, 12:58 IST
Last Updated 25 ಏಪ್ರಿಲ್ 2022, 12:58 IST
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟಿಸಿದ್ದ ಪ್ರಕರಣ ಸಂಬಂಧ ಶಾಸಕ ಜಿಗ್ನೇಶ್‌ ಮೆವಾನಿ ಅವರಿಗೆ ಕೊಕ್ರಜಾರ್‌ನ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಇದೇ ವಿಚಾರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸುಳ್ಳು ಆರೋಪದ ಮೇಲೆ ಗುಜರಾತ್ ಶಾಸಕ ಮತ್ತು ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಅವರನ್ನು ಬಂಧಿಸಿರುವ ಬಿಜೆಪಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕಲು ಹೊರಟಿರುವುದು ಅತ್ಯಂತ ಖಂಡನೀಯ. ರಾಜಕೀಯ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಎದುರಿಸಲಾಗದೆ ಈ ರೀತಿ ಬಾಯಿಮುಚ್ಚಿಸುವುದು ಸರ್ವಾಧಿಕಾರಿ ಧೋರಣೆ ಎಂದಿದ್ದಾರೆ.

ಯಾವುದೇ ಹೇಳಿಕೆಗಳಿಂದ ಯಾರಿಗಾದರೂ ಮಾನಹಾನಿಯಾಗಿದ್ದರೆ ಸಂಬಂಧಿತರಿಗೆ ನ್ಯಾಯಾಲಯದಲ್ಲಿ ನ್ಯಾಯ ಕೇಳಲು ಅವಕಾಶ ಇದೆ. ಇದರ ಬದಲಿಗೆ ಪೊಲೀಸರನ್ನು ದುರುಪಯೋಗಪಡಿಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಹೊರಟಿರುವುದು ಫ್ಯಾಸಿಸ್ಟ್ ಬುದ್ದಿ. ಭಾರತದಲ್ಲಿ ಇದು ನಡೆಯದು ಎಂದು ತಿಳಿಸಿದ್ದಾರೆ.

ADVERTISEMENT

ದೇಶವನ್ನು ಪ್ರೀತಿಸುವ, ಸಂವಿಧಾನದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬರೂ ಜಿಗ್ನೇಶ್ ಮೇವಾನಿ ಜೊತೆ ಇದ್ದಾರೆ. ಒಬ್ಬ ಜಿಗ್ನೇಶ್‌ರನ್ನು ಜೈಲಿಗೆ ಕಳಿಸಿದ್ದೇವೆ ಎಂದು ಬೀಗುವುದು ಬೇಡ, ಈ ಬೆಳವಣಿಗೆಯಿಂದಾಗಿ ದೇಶದ ತುಂಬ ನೂರಾರು ಜಿಗ್ನೇಶರು ಹುಟ್ಟಿಕೊಂಡು ಹೋರಾಟವನ್ನು ಮುಂದುವರಿಸಲಿದ್ದಾರೆ ಎನ್ನುವುದು ನೆನಪಲ್ಲಿರಲಿ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.