ADVERTISEMENT

ಅನ್ನ ಭಾಗ್ಯ ಯೋಜನೆ: ಎಚ್‌ಡಿಕೆ ಟೀಕೆಗೆ ಸಿದ್ದರಾಮಯ್ಯ ಎದಿರೇಟು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 16:40 IST
Last Updated 20 ಸೆಪ್ಟೆಂಬರ್ 2021, 16:40 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಬೆಂಗಳೂರು: ‘ಅನ್ನ ಭಾಗ್ಯ ಯೋಜನೆಯಡಿ 7 ಕೆ.ಜಿ. ಅಕ್ಕಿ ನೀಡಲು ಸಿದ್ದರಾಮಯ್ಯ ಹಣ ಎತ್ತಿಡಲಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನನ್ನ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷ 7 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಿದ್ದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಸೋಮವಾರ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ‘ಹಣ ಇಡದ ಕಾರಣ ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಆಯಿತು ಎಂದು ಕುಮಾರಸ್ವಾಮಿ ಮೊನ್ನೆ ಹೇಳಿಕೊಂಡರು. ಸರ್ಕಾರ ಯಾವುದಾದರೂ ಹೊಸ ಘೋಷಣೆ ಮಾಡಿದರೆ ಅದನ್ನು ಮುಂದುವರಿಸುವುದು ಮುಂದಿನ ಸರ್ಕಾರದ ಜವಾಬ್ದಾರಿ. ಒಂದು ವೇಳೆ ಅನುದಾನ ಕೊರತೆ ಉಂಟಾದರೆ ಪೂರಕ ಬಜೆಟ್‌ನಲ್ಲಿ ಅದಕ್ಕೆ ವ್ಯವಸ್ಥೆ ಮಾಡಬೇಕು’ ಎಂದರು.

ಎಚ್‌.ಡಿ.ಕುಮಾರಸ್ವಾಮಿ, ‘17 ಲಕ್ಷ ಮನೆಗಳ ನಿರ್ಮಾಣಕ್ಕೆ ₹29 ಸಾವಿರ ಕೋಟಿಯ ಯೋಜನೆ ರೂಪಿಸಿ ₹3 ಸಾವಿರ ಕೋಟಿ ಮೀಸಲಿಡಲಾಗಿತ್ತು ಎಂಬ ವಾಸ್ತವಾಂಶವನ್ನು ನಾನು ಸದನದ ಮುಂದೆ ಇಟ್ಟೆ. ಹಿಂದಿನ ಸರ್ಕಾರದ ಯೋಜನೆಯನ್ನು ಮುಂದುವರಿಸಬೇಕು ಎಂಬುದು ನಿಜ. ಎಲ್ಲ ದಾಖಲೆಗಳನ್ನು ತರಿಸಿ ಸದನದ ಮುಂದೆ ಇಟ್ಟರೆ ಎಲ್ಲರಿಗೂ ಸತ್ಯಾಂಶ ಗೊತ್ತಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.