ADVERTISEMENT

ಹಲ್ಲೆಕೋರರನ್ನು ಬಂಧಿಸದಿದ್ದರೆ ಚಡ್ಡಿ ಸುಡುವ ಪ್ರತಿಭಟನೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 2:43 IST
Last Updated 4 ಜೂನ್ 2022, 2:43 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ತಿಪಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಮನೆ ಎದುರು ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯದಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ನವರು ಹಿಂದೆ ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್‌ ಹಾಕುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸಿದ ಎನ್‌ಎಸ್‌ಯುಐ ಸದಸ್ಯರು ಸಾಂಕೇತಿಕವಾಗಿ ಒಂದು ಚಡ್ಡಿ ಸುಟ್ಟಿದ್ದರು. ಅವರ ಮೇಲೆ ಮನೆಗೆ ಬೆಂಕಿ ಹಚ್ಚಲು ಬಂ ದ ಆರೋ‍ಪ ಹೊರಿಸಿ ಬಂಧಿಸಲಾಗಿದೆ. ಇದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಒತ್ತಡವೇ ಕಾರಣ’ ಎಂದರು.

‘ರೋಹಿತ್‌, ಮಂಜು ಎಂಬ ರೌಡಿಗಳು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಮೊಕದ್ದಮೆ ದಾಖಲಿಸಿ, ತಕ್ಷಣ ಬಂಧಿಸಬೇಕು. ಹಲ್ಲೆಕೋರರ ವಿರುದ್ಧ ಕ್ರಮ ಜರುಗಿಸದೇ ಇದ್ದರೆ ರಾಜ್ಯದಾದ್ಯಂತ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರತಿಭಟನಾಕಾರರು ಸಚಿವರ ಮನೆಯ ಒಳಗೆ ಪ್ರವೇಶ ಮಾಡಿರಲಿಲ್ಲ. ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಅದನ್ನೇ ತಿರುಚಿ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.