ADVERTISEMENT

ಸಿ.ಡಿ. ಪ್ರಕರಣ: ಮುಖ್ಯಮಂತ್ರಿಯಲ್ಲೇ ಹುಳುಕಿದೆ ಎನಿಸುತ್ತದೆ -ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 8:16 IST
Last Updated 29 ಮಾರ್ಚ್ 2021, 8:16 IST
   

ಬೆಳಗಾವಿ: ‘ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸಿರುವುದನ್ನು ನೋಡಿದರೆ, ಅವರಲ್ಲೇ ಹುಳುಕಿದೆ ಎನಿಸುತ್ತದೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾನದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿ.ಡಿ. ಪ್ರಕರಣದ ಬಗ್ಗೆ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಇಡೀ ಪ್ರಕರಣ ಹಾಗೂ ಸಂತ್ರಸ್ತೆಯ ರಕ್ಷಣೆ ವಿಚಾರವಾಗಿ ಮುಖ್ಯಮಂತ್ರಿ ಮಾತನಾಡಿಬೇಕಿತ್ತು’ ಎಂದರು.

‘ಯುವತಿ ರಕ್ಷಣೆ ಕೊಡಿಸಿ ಎಂದು ವಿಡಿಯೊವೊಂದರಲ್ಲಿ ಕೋರಿದ್ದಾರೆ. ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಹೇಳಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಗುಲಾಮರಾಗಿರುವ ಸಂಸದರು:‘ರಾಜ್ಯಗಳ ವಿಚಾರದಲ್ಲಿ ಕೇಂದ್ರ ಹಸ್ತಕ್ಷೇಪ ಮಾಡುತ್ತಿದೆ’ ಎಂಬ ಸಚಿವ ಜಿ.ಸಿ. ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ಸಂಸದರು ಕೇಂದ್ರದ ಗುಲಾಮರಾಗಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸಮರ್ಪಕವಾಗಿ ಅನುದಾನ ಸಿಗುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಸಂಸದರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅವರಿಗೆ ಜನರು ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ. ಯಡಿಯೂರಪ್ಪ ಸರ್ಕಾರವೂ ಕೇಳುತ್ತಿಲ್ಲ, ಅದೂ ಹೇಡಿ ಸರ್ಕಾರವಾಗಿದೆ’ ಎಂದು ಕಿಡಿಕಾರಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತ, ಕೊಟ್ಟ ಭರವಸೆಗಳನ್ನು ಈಡೇರಿಸದಿರುವುದು, ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳದಿರುವುದು ಮೊದಲಾದ ವಿಷಯಗಳನ್ನು ಉಪ ಚುನಾವಣೆಯಲ್ಲಿ ಪ್ರಸ್ತಾಪಿಸುತ್ತೇವೆ’ ಎಂದರು.

ಜೋಶಿ ಸೈಡ್ ಆಕ್ಟರ್‌:‘ಸಿ.ಡಿ. ಪ್ರಕರಣದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಜನಮತ ಬರಲಿದೆ. ಅದು ತನಿಖೆಯ ಹಂತದಲ್ಲಿ ಇರುವುದರಿಂದ ನಾವು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ. ಎಸ್ಐಟಿ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಹೀಗಾಗಿ, ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್‌ಗೆ ಒಂದು ನಿಲುವಿಲ್ಲ. ಅದು ಬಸ್‌ ನಿಲ್ದಾಣವಾಗಿದೆ’ ಎಂಬ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ, ‘ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಸೈಡ್ ಆಕ್ಟರ್‌ ಅಷ್ಟೆ. ಬೆಲೆ ಏರಿಕೆ ಮಾಡಿದವರು ನಾವಾ, ದುರಾಡಳಿತ ನಡೆಸುತ್ತಿರುವವರು ನಾವಾ? ಆರ್‌ಎಸ್‌ಎಸ್‌ನವರು ಅವರ ನಿರ್ದೇಶಕರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮೋದಿ ಸರ್ಕಾರದಿಂದಾಗಿ ಜನರಿಗೆ ಒಳ್ಳೆಯ ದಿನಗಳು ಬಂದಿಲ್ಲ. ನರಕವಾಗಿ ಪರಿಣಮಿಸಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.