ADVERTISEMENT

ಕಾಂಗ್ರೆಸ್‌ ಪುನಶ್ಚೇತನಕ್ಕಾಗಿ ನಾಯಕತ್ವ ಬದಲಾಗಲಿ: ಹೈಕಮಾಂಡ್‌ಗೆ ಮುಖಂಡರ ದೂರು

ಕಾಂಗ್ರೆಸ್‌ ಪುನಶ್ಚೇತನ: ಕೆ.ಸಿ. ವೇಣುಗೋಪಾಲ್‌ ವಿರುದ್ಧವೂ ಮುಖಂಡರ ದೂರು

ಸಿದ್ದಯ್ಯ ಹಿರೇಮಠ
Published 11 ಡಿಸೆಂಬರ್ 2019, 1:02 IST
Last Updated 11 ಡಿಸೆಂಬರ್ 2019, 1:02 IST
   

ನವದೆಹಲಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಪಚುನಾವಣೆಯ ಸೋಲಿನ ಹೊಣೆ ಹೊತ್ತು ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಿ ಆ ಸ್ಥಾನಗಳಿಗೆ ಬೇರೆಯವರನ್ನು ನೇಮಿಸುವಂತೆ ಪಕ್ಷದ ರಾಜ್ಯ ಮುಖಂಡರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆ ಹಾಗೂ ನಂತರದ ಎಲ್ಲ ಚುನಾವಣೆಗಳಲ್ಲೂ ಸೋಲಿನ ಹಾದಿಯಲ್ಲೇ ಮುನ್ನಡೆದಿರುವ ಪಕ್ಷವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವರಿಕೆ ಮಾಡಲು ಕೆಲವು ಮುಖಂಡರು ನಿರ್ಧರಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ, ಸಂಸದರಾದ ಬಿ.ಕೆ. ಹರಿಪ್ರಸಾದ್‌ ಡಿ.ಕೆ. ಸುರೇಶ್, ನಾಸಿರ್‌ ಹುಸೇನ್‌, ಜಿ.ಸಿ. ಚಂದ್ರಶೇಖರ್‌ ಮತ್ತಿತರರು ಮಂಗಳವಾರ ದೆಹಲಿಯಲ್ಲಿ ಸಭೆ ನಡೆಸಿ ಈ ಕುರಿತು ಚರ್ಚಿಸಿದ್ದಾರೆ.

ADVERTISEMENT

ವರಿಷ್ಠರು ಮೀನ–ಮೇಷ ಎಣಿಸದೆ ರಾಜ್ಯದಲ್ಲಿ ಕಾಂಗ್ರೆಸ್‌ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಪಕ್ಷದ ಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಅಂಶವನ್ನು 20ಕ್ಕೂ ಹೆಚ್ಚು ಜನ ಮುಖಂಡರೊಂದಿಗೆ ಇದೇ 13ರಂದು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯ ಘಟಕದ ಇತರ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ಡಿ.ಕೆ. ಶಿವಕುಮಾರ್, ಎಚ್‌.ಕೆ. ಪಾಟೀಲ್‌ ಮತ್ತಿತರರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸುವ ಮೂಲಕ, ಸಮರ್ಥರಿಗೆ ನಾಯಕತ್ವ ವಹಿಸುವಂತೆ ಕೋರುವ ಕುರಿತೂ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.

ವೇಣುಗೋಪಾಲ್‌ ವಿರುದ್ಧ ಕಿಡಿ: ಲೋಕಸಭೆ ಚುನಾವಣೆ ಮತ್ತು ಉಪ ಚುನಾವಣೆಯ ಫಲಿತಾಂಶಕ್ಕೆ ಜೆಡಿಎಸ್‌ನೊಂದಿಗಿನ ಮೈತ್ರಿ ಹಾಗೂ ಟಿಕೆಟ್‌ ಹಂಚಿಕೆಯೇ ಪ್ರಮುಖ ಕಾರಣ. ಅದಕ್ಕೆಲ್ಲ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಹ ಹೊಣೆ
ಯಾಗಿದ್ದಾರೆ ಎಂದು ಸಭೆಯಲ್ಲಿಕಿಡಿಕಾರಿರುವ ಮುಖಂಡರು, ಅವರನ್ನೂ ಬದಲಿಸುವಂತೆ ಒತ್ತಾಯಿಸಲಿದ್ದಾರೆ.

ಸಮ್ಮಿಶ್ರ ಸರ್ಕಾರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು ಕಾಂಗ್ರೆಸ್‌ ತ್ಯಜಿಸಿದ್ದರಿಂದ ಸರ್ಕಾರ ಪತನಗೊಂಡಿತು. ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಅವರಿಂದಲೂ ನಿರ್ಲಕ್ಷ್ಯಕ್ಕೆ ಒಳಗಾದ ಶಾಸಕರು ಪಕ್ಷ ತ್ಯಜಿಸಲಿದ್ದಾರೆ ಎಂದು ಗಮನ ಸೆಳೆದರೂ ವೇಣುಗೋಪಾಲ್‌ ಗಮನಿಸಲಿಲ್ಲ. ಇಂಥವರಿಂದಲೇ ಪಕ್ಷ ಸಮಸ್ಯೆಗೆ ಸಿಲುಕಿದ್ದಾಗಿ ಸೋನಿಯಾ ಅವರಲ್ಲಿ ದೂರು ನೀಡಲು ಬಹುತೇಕ ಮುಖಂಡರು ಸಮ್ಮತಿ ಸೂಚಿಸಿದ್ದಾರೆ.

ಖರ್ಗೆ ಜೊತೆ ಚರ್ಚೆ: ಉಪಚುನಾವಣೆಯ ಫಲಿತಾಂಶದ ಕುರಿತು ರಾಜ್ಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಂಗಳವಾರ ಚರ್ಚಿಸಿದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಈ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವರದಿ ಸಲ್ಲಿಸಲು ನಿರ್ಧರಿಸಿದ್ದಾರೆ.

‘ರಾಜೀನಾಮೆ: ಉತ್ತಮ ಬೆಳವಣಿಗೆ’

‘ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿರುವುದು ಉತ್ತಮ ಬೆಳವಣಿಗೆ’ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹೇಳಿದರು.

‘ಹಣ ಬಲ, ಆಡಳಿತ ಯಂತ್ರದ ದುರ್ಬಳಕೆಯಿಂದ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಣ ಹಂಚಿಕೆಯ ಕುರಿತು ದೂರು ನೀಡಿದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳಲಿಲ್ಲ. ಈ ಕಾರಣಗಳಿಂದಾಗಿ ಕಾಂಗ್ರೆಸ್‌ಗೆ ಸೋಲುಂಟಾಗಿದೆ. ಇಬ್ಬರೂ ಮುಖಂಡರು ಬೇಸರದಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ನಡೆಯನ್ನು ಸ್ವಾಗತಿಸುತ್ತೇನೆ’ ಎಂದು ಅವರು ತಿಳಿಸಿದರು.

***

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಬಹುತೇಕರು ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಮತ್ತೆ ಅವರು ಪಕ್ಷಕ್ಕೆ ಮರಳಲಿದ್ದಾರೆ ಎಂಬ ವಿಶ್ವಾಸವಿದೆ

- ಕೆ.ಎಚ್‌. ಮುನಿಯಪ್ಪ, ಕೇಂದ್ರದ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.