ADVERTISEMENT

ಅಧಿವೇಶನಕ್ಕೆ ಗೈರು: ‘ಕೈ’ ಶಾಸಕರ ಒತ್ತಡ ತಂತ್ರ

ಅನುದಾನ ಬೇಡಿಕೆ: ಒಂದಾದ 16ಕ್ಕೂ ಹೆಚ್ಚು ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
   

ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನಕ್ಕೆ ಗೈರಾಗುವ ತಂತ್ರ ಬಳಸಿ, ಸರ್ಕಾರ ಹಾಗೂ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಶಾಸಕರು ಮುಂದಾಗಿದ್ದಾರೆ.

ಸಚಿವ ಸಂಪುಟವನ್ನು ಕೂಡಲೇ ವಿಸ್ತರಣೆ ಮಾಡಬೇಕು ಹಾಗೂ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಜತೆಗೆ, ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂಬುದು ಶಾಸಕರ ಆಗ್ರಹ.

ಸಚಿವ ಸ್ಥಾನದ ಆಕಾಂಕ್ಷಿಗಳಾದ ಎಂ.ಟಿ.ಬಿ. ನಾಗರಾಜ್, ಪಿ.ಟಿ. ಪರಮೇಶ್ವರ ನಾಯ್ಕ, ಬಿ.ಸಿ. ಪಾಟೀಲ, ಡಾ. ಸುಧಾಕರ್‌, ಟಿ. ರಘುಮೂರ್ತಿ, ಆರ್. ರೋಷನ್ ಬೇಗ್‌, ಎಂ. ಕೃಷ್ಣಪ್ಪ ಸೇರಿದಂತೆ 16 ಶಾಸಕರು ಗುಂಪಿನಲ್ಲಿದ್ದಾರೆ. ಮುಂಚೂಣಿಯಲ್ಲಿರುವ ಕೆಲವರು ಬೆಂಗಳೂರಿನಲ್ಲಿ ಶುಕ್ರವಾರ ಸಭೆ ಸೇರಿ ಈ ಒತ್ತಡ ತಂತ್ರ ಹೆಣೆಯುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

ವಿವಿಧ ಕಾರಣ ಮುಂದಿಟ್ಟು ಸಂಪುಟ ವಿಸ್ತರಣೆ ಮುಂದೂಡಲಾಗುತ್ತಿದೆ. ಹೀಗೆ ಮುಂದೂಡುತ್ತಾ ಹೋದರೆ, ಮತ್ತೆ ಲೋಕಸಭೆ ಚುನಾವಣೆ ಘೋಷಣೆಯಾಗಲಿದೆ. ಆ ನೆಪ ಇಟ್ಟುಕೊಂಡು ಮುಂದಕ್ಕೆ ತಳ್ಳಲಾಗುತ್ತದೆ. ಅಧಿವೇಶನದ ವೇಳೆ ಒತ್ತಡ ಹೇರುವುದು ಸೂಕ್ತ ಎಂಬ ಚರ್ಚೆ ಶಾಸಕರ ಮಧ್ಯೆ ನಡೆಯಿತು ಎಂದು ಗೊತ್ತಾಗಿದೆ.

ಕಾಂಗ್ರೆಸ್‌ ಶಾಸಕರ ಭೇಟಿಗೆ ಮುಖ್ಯಮಂತ್ರಿ ಸಮಯವನ್ನೇ ಕೊಡುತ್ತಿಲ್ಲ. ಮನೆಯ ಬಳಿ ಹೋದರೂ ಮಾತನಾಡಿಸುವ ಔದಾರ್ಯ ತೋರುವುದಿಲ್ಲ. ಮೈತ್ರಿ ಸರ್ಕಾರದ ದೊಡ್ಡ ಪಾಲುದಾರ ಪಕ್ಷದ ಪ್ರತಿನಿಧಿಗಳನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರಗಳಿಗೆ ನಿರೀಕ್ಷಿತ ಮಟ್ಟದ ಅನುದಾನವನ್ನೂ ಬಿಡುಗಡೆ ಮಾಡುತ್ತಿಲ್ಲ ಎಂದೂ ಕೆಲವರು ಪ್ರತಿ ಪಾದಿಸಿದರು ಎಂದು ತಿಳಿದುಬಂದಿದೆ.

ಅನುದಾನ ಸಿಗುತ್ತಿಲ್ಲ: ಸತೀಶ ಜಾರಕಿಹೊಳಿ

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶಾಸಕ ಕ್ಷೇತ್ರಗಳಿಗೆ ಸಾಕಷ್ಟು ಅನುದಾನ ಸಿಗುತ್ತಿತ್ತು. ಮೈತ್ರಿ ಸರ್ಕಾರದಲ್ಲಿ ಸಮರ್ಪಕ ಅನುದಾನ ಸಿಗುತ್ತಿಲ್ಲ’ ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಚಿವ ಸಂಪುಟ ವಿಸ್ತರಣೆ ಬೇಗ ಆದರೆ ಒಳ್ಳೆಯದು. ಈ ಬಗ್ಗೆ ಶಾಸಕರಲ್ಲಿ ಅಸಮಾಧಾನವಿದೆ’ ಎಂದು ಹೇಳಿದ ಅವರು, ‘ಸರ್ಕಾರ ಇನ್ನೂ ಟೇಕ್‌ ಆಫ್ ಆಗಿಲ್ಲ. ನಿಧಾನವಾಗಿದೆ. ಸ್ವಲ್ಪ ಕಾಲಾವಕಾಶ ಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.