ADVERTISEMENT

Leadership Row| ನಾಯಕತ್ವ ಬದಲಾವಣೆ: ಕಾಂಗ್ರೆಸ್‌ ನಾಯಕರ ಗೋಪ್ಯ ಸಭೆ ಮತ್ತೆ ಶುರು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 23:30 IST
Last Updated 5 ಡಿಸೆಂಬರ್ 2025, 23:30 IST
<div class="paragraphs"><p>ಸಿದ್ದರಾಮಯ್ಯ, ಡಿಕೆಶಿ</p></div>

ಸಿದ್ದರಾಮಯ್ಯ, ಡಿಕೆಶಿ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತಣ್ಣಗಾಗಿದ್ದರೂ ಕಾಂಗ್ರೆಸ್‌ ನಾಯಕರ ಗೋಪ್ಯ ಸಭೆಗಳು ಮತ್ತೆ ಮುಂದುವರಿದಿವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಪ್ರಿಯಾಂಕ್‌ ಖರ್ಗೆ ಜತೆಗೆ ಅನೌಪಚಾರಿಕ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ..

ADVERTISEMENT

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಮದುವೆಯೊಂದರಲ್ಲಿ ಭಾಗಿಯಾಗಿದ್ದರು. ಅದೇ ಮದುವೆ ಕಾರ್ಯಕ್ರಮಕ್ಕೆ ಡಿ.ಕೆ.ಶಿವಕುಮಾರ್ ಸಹ ಬಂದರು. ಪರಸ್ಪರ ಎದುರಾದ ಇಬ್ಬರು ನಾಯಕರೂ, ಪ್ರತ್ಯೇಕವಾಗಿ ಕುಳಿತು ಒಂದು ತಾಸಿಗೂ ಹೆಚ್ಚು ಮಾತುಕತೆ ನಡಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದನ್ನು ಇಬ್ಬರು ನಾಯಕರೂ ಖಚಿತಪಡಿಸಿದ್ದು, ಅದು ಆಕಸ್ಮಿಕ ಭೇಟಿ ಎಂದಷ್ಟೇ ಹೇಳಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬದಲಾವಣೆ ಬಗ್ಗೆ ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ. ಆದರೆ ಇಬ್ಬರೂ, ಅಂತಹ ಚರ್ಚೆ ನಡೆದಿಲ್ಲ ಎಂದಿದ್ದಾರೆ.

ಇದರ ಬೆನ್ನಲ್ಲೇ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಡಿ.ಕೆ.ಶಿವಕುಮಾರ್ ಅವರ ಮನೆಗೆ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿದ್ದರು. ಅಲ್ಲಿ ಇಬ್ಬರು ನಾಯಕರೂ ಒಂದು ತಾಸು ಮಾತುಕತೆ ನಡೆಸಿದರು. ಈ ವೇಳೆ ಯಾವೆಲ್ಲಾ ವಿಚಾರಗಳನ್ನು ಚರ್ಚಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

‘ವಿಶೇಷ ಅರ್ಥ ಕಲ್ಪಿಸಬೇಡಿ’
‘ಮದುವೆಯೊಂದರಲ್ಲಿ ನಾನು ಮತ್ತು ಸತೀಶ ಜಾರಕಿಹೊಳಿ ಅವರು ಬೇಟಿಯಾಗಿದ್ದು ನಿಜ. ರಾಜ್ಯ ಮತ್ತು ಪಕ್ಷದ ವಿಚಾರ ಮಾತನಾಡಿದ್ದೇವೆ. ನಾನು ಮತ್ತು ಸತೀಶ್‌ ಸಹೋದ್ಯೋಗಿಗಳು. ನಮ್ಮನ್ನು ವೈರಿಗಳಂತೆ ಏಕೆ ನೋಡುತ್ತೀರಿ’ ಎಂದು ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾವು ಮಧ್ಯಾಹ್ನ ಸಚಿವ ಸಂಪುಟ ಸಭೆಯಲ್ಲಿ ಇರುತ್ತೇವೆ, ರಾತ್ರಿ ಊಟಕ್ಕೆ ಸೇರುತ್ತೇವೆ. ಬೆಳಿಗ್ಗೆ ತಿಂಡಿಗೆ ಸೇರುತ್ತೇವೆ. ಇವೆಲ್ಲ ಇದ್ದೇ ಇರುತ್ತದೆ. ರಾಜಕೀಯದಲ್ಲಿ ಸ್ನೇಹ, ಬಾಂಧವ್ಯ, ನೆಂಟಸ್ಥನ ಇದ್ದೇ ಇರುತ್ತದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ’ ಎಂದರು.

‘ಕೆಪಿಸಿಸಿ ಅಧ್ಯಕ್ಷಗಿರಿ ಚರ್ಚೆಯಾಗಿಲ್ಲ’

‘ನಾನು ಒಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಡಿ.ಕೆ.ಶಿವಕುಮಾರ್ ಅವರೂ ಆ ಮದುವೆಗೆ ಬಂದಿದ್ದರು. ಅದೊಂದು ಆಕಸ್ಮಿಕ ಭೇಟಿ ಅಷ್ಟೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಅದು ಪೂರ್ವನಿಗದಿತ ಭೇಟಿ ಆಗಿರಲಿಲ್ಲ. ಅಚಾನಕ್ಕಾಗಿ ಸಿಕ್ಕಾಗ ಕೆಲಹೊತ್ತು ಮಾತನಾಡಿದೆವು ಅಷ್ಟೆ. ಸ್ವಲ್ಪ ಜಾಸ್ತಿಯೇ ಮಾತನಾಡಿರ ಬಹುದು. ಕೆಪಿಸಿಸಿ ಅಧ್ಯಕ್ಷ ಹುದ್ದೆ, ಬದಲಾವಣೆ ಬಗ್ಗೆ ಯಾವುದೇ ಮಾತು ಆಡಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.