
ಮೈಸೂರು: ‘ನಾಯಕತ್ವ ಬದಲಾವಣೆ ಕುರಿತು ಪಕ್ಷದ ನಾಯಕ ರಾಹುಲ್ ಗಾಂಧಿ ತೀರ್ಮಾನಿಸಬೇಕು. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ತಿಳಿಸಿದರು.
ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಾನು ಈ ಕುರಿತು ಪಕ್ಷದ ವರಿಷ್ಠರ ಜೊತೆಗೆ ಮಾತನಾಡಿದ್ದೇನೆ. ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ. ಅಲ್ಲಿಗೆ ಎಲ್ಲವೂ ಮುಗಿಯಿತು’ ಎಂದು ಹೇಳಿದರು.
‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಒಪ್ಪಬೇಕಾದ ವಿಚಾರ. ಪಕ್ಷಕ್ಕಿಂತ ಯಾರೂ ದೊಡ್ಡವರಾಗಲು ಸಾಧ್ಯವೇ ಇಲ್ಲ. ಸಂಕ್ರಾಂತಿಗೆ ಕ್ರಾಂತಿಯೂ ಇಲ್ಲ. ಸಮಸ್ಯೆ ಏನೇ ಇದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದರು.
ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ‘ಪಕ್ಷದ ಅಧ್ಯಕ್ಷರನ್ನು ಯಾರಾದರೂ ಭೇಟಿಯಾದರೆ ತಪ್ಪೇನು? ಭೇಟಿಯಾಗಲಿ’ ಎಂದರು.
‘ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ನಾನೇ’ ಎಂಬ ಶಿವಕುಮಾರ್ ಹೇಳಿಕೆಗೆ, ‘ಅಧಿಕಾರದಲ್ಲಿ ಇದ್ದಾಗ ನಾನು ಮಾಡಿದೆ, ಅವರು ಮಾಡಿದರು ಎನ್ನುವುದು ಮುಖ್ಯವಲ್ಲ. ಆ ಪ್ರಶ್ನೆಯೇ ಇಲ್ಲ. ಎಸ್.ಎಂ.ಕೃಷ್ಣ ಅವರು ಆಗ ಮುಖ್ಯಮಂತ್ರಿ ಆಗಿದ್ದರು, ಸರ್ಕಾರ ಮಾಡಿತ್ತು’ ಎಂದು ಪ್ರತಿಕ್ರಿಯಿಸಿದರು.
‘ರಾಜ್ಯ ಬಜೆಟ್ ಸಿದ್ಧತೆ ನಡೆದಿದೆಯೇ’ ಎಂಬ ಪ್ರಶ್ನೆಗೆ, ‘ತಯಾರಿ ನಡೆಸುವಾಗ ನಿಮಗೆ ತಿಳಿಸುವೆ’ ಎಂದು ಹೇಳಿದರು.
ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲೇ ಹೆಚ್ಚು ಚರ್ಚೆಯಾಗುತ್ತಿದೆ. ಆ ಬಗ್ಗೆ ಇಷ್ಟೊಂದು ಪ್ರಶ್ನಿಸುವ ಅಗತ್ಯವೇನಿದೆ? ವಿಧಾನಸಭೆಯಲ್ಲಿಯೇ ಹೇಳಿದ ಮೇಲೂ ಈ ಬಗ್ಗೆ ಚರ್ಚಿಸುವ ಅಗತ್ಯವಿಲ್ಲಸಿದ್ದರಾಮಯ್ಯ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.