ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ವಿಚಾರದಲ್ಲಿ ಅಹಿಂದ ಸಂಘಟನೆಗಳು ಸಿದ್ದರಾಮಯ್ಯ ಪರವಾಗಿ ಲಾಬಿಗೆ ಇಳಿದಿದ್ದು, ಒಕ್ಕಲಿಗ ಮಠ–ಸಂಘಟನೆಗಳ ಬೆದರಿಕೆಗೆ ಜಗ್ಗುವುದಿಲ್ಲ ಎಂದಿವೆ. ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿದರೆ ಅಹಿಂದ ಸಮುದಾಯದವರು ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.
ಒಕ್ಕಲಿಗ ಸಂಘವು ಡಿ.ಕೆ.ಶಿವಕುಮಾರ್ ಅವರ ಪರ ಗುರುವಾರ ಮಾತನಾಡಿದ ಬೆನ್ನಲ್ಲೇ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ತುರ್ತು ಸುದ್ದಿಗೋಷ್ಠಿ ಕರೆಯಿತು.
ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ‘ಅಹಿಂದ ಸಮುದಾಯದ ಜನರು ಮತ ನೀಡಿರುವುದರಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಒಕ್ಕಲಿಗ ಸಮುದಾಯದ ಮಠಗಳು ಮತ್ತು ಸಂಘಗಳು ಅವರ ನಾಯಕರ ಪರವಾಗಿ ಲಾಬಿ ಮಾಡುವುದಾದರೆ, ನಾವು ಅಹಿಂದ ನಾಯಕರ ಪರವಾಗಿ ಅಖಾಡಕ್ಕೆ ಇಳಿಯುತ್ತೇವೆ’ ಎಂದರು.
‘ರಾಜ್ಯದಲ್ಲಿ ಅಹಿಂದ ಸಮುದಾಯದವರೇ ಬಹುಸಂಖ್ಯಾತರು ಎಂಬುದನ್ನು ಸಾಬೀತುಪಡಿಸಿದ್ದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯ ಶಿಫಾರಸುಗಳು ಜಾರಿ ಆಗದಂತೆ ಪ್ರಬಲ ಸಮುದಾಯದವರು ನೋಡಿಕೊಂಡರು. ಸ್ವಾತಂತ್ರ್ಯ ಬಂದಾಗಿನಿಂದಲೂ ಈ ರೀತಿಯ ಬೆದರಿಕೆ, ದಬ್ಬಾಳಿಕೆಗಳನ್ನು ನಡೆಸಿಕೊಂಡೇ ಬಂದಿದ್ದಾರೆ. ಆದರೆ ಈಗ ಅವರ ಬೆದರಿಕೆಗೆ ಜಗ್ಗುವಂತಹ ಪರಿಸ್ಥಿತಿ ಇಲ್ಲ’ ಎಂದರು.
‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ನಾವು ಅವಕಾಶ ಕೊಡುವುದಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ರಾಜ್ಯದಲ್ಲಿ ಮೇಲ್ವರ್ಗ ಮತ್ತು ಕೆಳವರ್ಗಗಳ ಮಧ್ಯೆ ಸಂಘರ್ಷ ಉಂಟಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಅದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಆಗ್ರಹಿಸಿದರು.
‘ಡಿ.ಕೆ.ಶಿವಕುಮಾರ್ ಅವರ ಶ್ರಮಕ್ಕೆ ಕೂಲಿ ಕೊಡಿ ಎಂದು ಒಕ್ಕಲಿಗರ ಸಂಘದವರು ಆಗ್ರಹಿಸಿದ್ದಾರೆ. ಶಿವಕುಮಾರ್ ಅವರಿಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆಯಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.