
ಬೆಂಗಳೂರು: ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಬಿ.ಎಂ. ನಾಗರಾಜ್, ಹಂಪನಗೌಡ ಬಾದರ್ಲಿ ಸೇರಿದಂತೆ ಎಂಟಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಮಂಗಳವಾರ ರಾತ್ರಿ ವಿದೇಶ ಪ್ರವಾಸಕ್ಕೆ ತೆರಳಿದರು.
ಎರಡು ಹಂತಗಳಲ್ಲಿ 20ಕ್ಕೂ ಹೆಚ್ಚು ಶಾಸಕರು ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ಗೊತ್ತಾಗಿದೆ. ಮೊದಲ ದಿನವಾದ ಮಂಗಳವಾರ ಎಂಟಕ್ಕೂ ಹೆಚ್ಚು ಮಂದಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಸ್ಟ್ರೇಲಿಯಾಗೆ ಹಾರಿದ್ದಾರೆ. ಉಳಿದವರು, ಬುಧವಾರ ಪ್ರಯಾಣ ಬೆಳೆಸಲಿದ್ದಾರೆ.
ಈ ವೇಳೆ ಮಾತನಾಡಿದ ಪುಟ್ಟರಂಗಶೆಟ್ಟಿ, ‘ವಿದೇಶ ಪ್ರವಾಸ ಹೋಗಲು ಹೈಕಮಾಂಡ್ ಅನುಮತಿ ಬೇಕಾಗಿಲ್ಲ. ನಾನು ವಿದೇಶ ಪ್ರವಾಸಕ್ಕೆ ಹೋಗುತ್ತಿದ್ದೇನೆ. ಯಾರೆಲ್ಲಾ ಬರುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದರು.
‘ಕೆಪಿಸಿಸಿ ಅಧ್ಯಕ್ಷರಿಗೆ ಮಾಹಿತಿ ನೀಡಿದ್ದೀರಾ’ ಎಂಬ ಪ್ರಶ್ನೆಗೆ, ‘ಮುಖ್ಯಮಂತ್ರಿಗೇ ತಿಳಿಸಿಲ್ಲ. ಇನ್ನು ಉಪಮುಖ್ಯಮಂತ್ರಿಗೆ ಯಾಕೆ ಹೇಳಬೇಕು’ ಎಂದು ಪ್ರಶ್ನಿಸಿದರು.
ಜಗಳೂರು ಶಾಸಕ ಬಿ. ದೇವೇಂದ್ರಪ್ಪ, ಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ವಸಂತಕುಮಾರ್ ಅವರೂ ವಿದೇಶ ಪ್ರವಾಸಕ್ಕೆ ಮಂಗಳವಾರ ರಾತ್ರಿ ಹೊರಟ ತಂಡದಲ್ಲಿದ್ದಾರೆ.
ತಪ್ಪು ಎನ್ನುವುದು ಸರಿಯಲ್ಲ: ‘ಶಾಸಕರು ಸದುದ್ದೇಶದಿಂದ ಮಾಡುವ ವಿದೇಶ ಪ್ರವಾಸಕ್ಕೆ ಹೋಗಿ ಬರಲಿ. ಅದನ್ನು ತಪ್ಪು ಎನ್ನುವುದು ಸರಿಯಲ್ಲ’ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.
ವಿದೇಶದಲ್ಲಿ ನಮಗೆ ಒಳ್ಳೆಯದಾಗುವ ಕೆಲವು ಸಂಗತಿಗಳು ಇರುತ್ತವೆ. ಅದನ್ನು ತಿಳಿದುಕೊಂಡು ಬಂದು ಇಲ್ಲಿ ಅಳವಡಿಸಿಕೊಂಡರೆ ಒಳ್ಳೆಯದಲ್ಲವೇ?. ಪ್ರಪಂಚದ ಯಾವ ಯಾವ ದೇಶಗಳಲ್ಲಿ ರೈತರಿಗೆ ಅನುಕೂಲ ಆಗುವ ಪದ್ದತಿ ಇರುತ್ತದೆಯೋ ಅದನ್ನು ಕಲಿತು ಬರಲಿ. ಯಾಕೆ ಪ್ರವಾಸನ್ನು ತಡೆಯುತ್ತಾರೆ, ಅದು ಸರಿಯಲ್ಲ. ಅದಕ್ಕೆ ಕಠಿಣ ಪದ ಬಳಸಿದರೆ ತಪ್ಪಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ: ‘ಶಾಸಕರು ವಿದೇಶಕ್ಕೆ ಹೋಗಿ ಬರುತ್ತಾರೆ. ಅದರಲ್ಲಿ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಕೆಲಸಗಳ ಒತ್ತಡ, ಗೊಂದಲಗಳ ಮಧ್ಯೆ ಕುಟುಂಬ ಹಾಗೂ ಸ್ನೇಹಿತರ ವಿದೇಶ ಪ್ರವಾಸ ಎಲ್ಲರಿಗೂ ನೆಮ್ಮದಿ ನೀಡುತ್ತದೆ’ ಎಂದು ಬಮೂಲ್ ಅದ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.
ಶಾಸಕರ ವಿದೇಶ ಪ್ರವಾಸ ಗೊತ್ತಿಲ್ಲ: ಡಿಕೆಶಿ
‘ನನಗೆ ಯಾವ ಪ್ರವಾಸದ ಬಗ್ಗೆ ಮಾಹಿತಿಯೂ ಇಲ್ಲ. ಈ ಬಗ್ಗೆ ನನಗೆ ಮಾಧ್ಯಮಗಳಿಂದಷ್ಟೆ ಗೊತ್ತಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಸಿದ್ದರಾಮಯ್ಯ ಅವರ ಆಪ್ತ ಶಾಸಕರು ಶಾಸಕರು ವಿದೇಶ ಪ್ರವಾಸ ಕೈಗೊಂಡಿರುವ ಬಗ್ಗೆ ಸುದ್ದಿಗಾರರ ಕೇಳಿದಾಗ ಪ್ರತಿಕ್ರಿಯಿಸಿದ ಅವರು, ‘ಇದು ಅವರ ವೈಯಕ್ತಿಕ ಪ್ರವಾಸವೊ, ಬೇರೆಯವರು ಅವರನ್ನು ಪ್ರವಾಸಕ್ಕೆ ಕಳುಹಿಸುತ್ತಿದ್ದಾರೊ ಗೊತ್ತಿಲ್ಲ. ಪ್ರವಾಸ ಕಳುಹಿಸುತ್ತಿರುವವರು ಉಂಟು, ಪ್ರವಾಸ ಹೋಗುತ್ತಿರು ವವರು ಉಂಟು. ಪಕ್ಷದ ಅಧ್ಯಕ್ಷ ನಾಗಿ ನಾನು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.