ADVERTISEMENT

‘ಕೈ’ ಟಿಕೆಟ್‌ಗಾಗಿ ಭಾರಿ ಪೈಪೋಟಿ

ಪರಿಷತ್‌ ಚುನಾವಣೆ: ಸಿದ್ದರಾಮಯ್ಯ ಮನೆಗೆ ಕಾಂಗ್ರೆಸ್‌ ನಾಯಕರ ದಂಡು

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 19:31 IST
Last Updated 13 ಜೂನ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇದೇ 29ರಂದು ನಡೆಯಲಿರುವ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಕಾಂಗ್ರೆಸ್‌ನಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ. ಹಲವು ಕಾಂಗ್ರೆಸ್ ನಾಯಕರು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಡ ಹಾಕುತ್ತಿದ್ದಾರೆ.

ನಿವೃತ್ತಿಯಾಗುತ್ತಿರುವವರು ಪುನ ರಾಯ್ಕೆ ಬಯಸಿದರೆ, ಮತ್ತೆ ಹಲವರು ಹಿರಿತನ ಪರಿಗಣಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೆಲವರು ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತ ಕೋಟಾ ಮುಂದಿಟ್ಟು ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಸಿದ್ದರಾಮಯ್ಯ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ಮಾಜಿ ಸಚಿವ ಎಂ.ಆರ್. ಸೀತಾರಾಂ, ಪರಿಷತ್‌ ಟಿಕೆಟ್ ನೀಡಬೇಕೆಂದು ಬೇಡಿಕೆಯಿಟ್ಟರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸೀತಾರಾಂ, ‘35 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಎರಡು ವರ್ಷಗಳಿಂದ ನನಗೆ ಯಾವುದೇ ಸ್ಥಾನ ಸಿಕ್ಕಿಲ್ಲ. ಹಾಗೆಂದು, ನಾನು ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ನಾನು ನಿಷ್ಠಾವಂತ ಕಾರ್ಯಕರ್ತ. ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ’ ಎಂದರು.

ADVERTISEMENT

‘ಪಕ್ಷದ ಹಿತದೃಷ್ಠಿಯಿಂದ ನಾನು ಎಲ್ಲವನ್ನೂ ತ್ಯಾಗ ಮಾಡಿದ್ದೇನೆ. ಹಿಂದುಳಿದ ವರ್ಗದಡಿ ಟಿಕೆಟ್‌ ಕೇಳಿದ್ದೇನೆ’ ಎಂದರು. ಆ ಬೆನ್ನಲ್ಲೇ, ಅಬ್ದುಲ್ ಜಬ್ಬಾರ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮತ್ತೊಂದು ಬಾರಿ ವಿಧಾನ ಪರಿಷತ್‌ ಸದಸ್ಯರಾಗಲು ಅವಕಾಶ ಮಾಡಿಕೊಡುವಂತೆ ಎಂದು ಮನವಿ ಮಾಡಿದರು.

ನಂಜನಗೂಡು ಕ್ಷೇತ್ರದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಇದೇ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರು ಕೇಶವಮೂರ್ತಿ ಬೆನ್ನಿಗೆ ನಿಂತಿದ್ದಾರೆ. ನೇಕಾರ ಸಮುದಾಯದ ಮುಖಂಡ ಎಂ.ಡಿ. ಲಕ್ಷ್ಮೀನಾರಾಯಣ ಟಿಕೆಟ್ ಬಯಸಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಇನ್ನು, ಮಾಜಿ ಸಚಿವ ಚೆಲುವರಾಯ ಸ್ವಾಮಿ ಅವರೂ ಪರಿಷತ್‌ ಸ್ಥಾನದ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಜೊತೆ ಚರ್ಚಿಸಿದ ಬಳಿಕ ಒಂದೇ ಕಾರಿನಲ್ಲಿ ಎಚ್.ಸಿ. ಮಹದೇವಪ್ಪ, ಚೆಲುವರಾಯ ಸ್ವಾಮಿ ಮತ್ತು ಸಿದ್ದರಾಮಯ್ಯ ಗೌಪ್ಯ ಸ್ಥಳಕ್ಕೆ ತೆರಳಿದರು. ಎಚ್.ಎಂ. ರೇವಣ್ಣ, ಐವಾನ್ ಡಿಸೋಜಾ, ನಸೀರ್ ಅಹ್ಮದ್, ಎಂ.ಸಿ. ವೇಣುಗೋಪಾಲ್ ಮರು ಆಯ್ಕೆ ಬಯಸಿದರೆ, ಮಾಜಿ ಸಚಿವೆ ರಾಣಿ ಸತೀಶ್, ಮೋಟಮ್ಮ ಟಿಕೆಟ್‌ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಕೆಪಿಸಿಸಿ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ನಟರಾಜ ಗೌಡ, ಸೂರಜ್ ಹೆಗ್ಡೆ, ನಿವೇದಿತ್‌ ಆಳ್ವಾ ಕೂಡಾ ಮನವಿ ಸಲ್ಲಿಸಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ತಮಗೆ ಅವಕಾಶ ಕೊಟ್ಟೇ ಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.