ADVERTISEMENT

ಬಡವರ ಮೇಲೆ ಲಸಿಕೆ ಪ್ರಯೋಗ ಪ್ರಶ್ನಿಸಿದ್ದಷ್ಟೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 19:30 IST
Last Updated 21 ಮೇ 2021, 19:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕೋವಿಡ್‌ ಲಸಿಕೆಯನ್ನು ಕಾಂಗ್ರೆಸ್‌ ವಿರೋಧಿಸಿರಲಿಲ್ಲ. ಆಶಾ ಕಾರ್ಯಕರ್ತೆಯರು ಸೇರಿದಂತೆ ಬಡವರ ಮೇಲೆ ಲಸಿಕೆ ಪ್ರಯೋಗ ಮಾಡುವುದನ್ನು ತಮ್ಮ ಪಕ್ಷ ಪ್ರಶ್ನಿಸಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಆರಂಭದಲ್ಲಿ ಬಿಜೆಪಿಯವರಿಗೇ ಲಸಿಕೆ ಮೇಲೆ ನಂಬಿಕೆ ಇರಲಿಲ್ಲ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಲಸಿಕೆ ತೆಗೆದುಕೊಳ್ಳದೇ ಬಡವರ ಮೇಲೆ ಅದನ್ನು ಪ್ರಯೋಗಿಸಿದ್ದರು’ ಎಂದರು.

‘ಲಸಿಕೆಯನ್ನು ವಿರೋಧಿಸಿದ್ದರೆ ಸಿದ್ದರಾಮಯ್ಯ, ನಾನು ಮತ್ತು ನಮ್ಮ ಪಕ್ಷದ ನಾಯಕರು ತೆಗೆದುಕೊಳ್ಳುತ್ತಿದ್ದೆವಾ? ನಾವು ಕೊಟ್ಟ ಸಹಕಾರವನ್ನು ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಸುಮ್ಮನೆ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುತ್ತಿದೆ’ ಎಂದು ದೂರಿದರು.

ಕೋವಿಡ್‌ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ಜನರ ನೆರವಿಗೆ ನಿಂತಿದೆ. ಸಹಾಯವಾಣಿ, ಆಂಬುಲೆನ್ಸ್‌, ಔಷಧಿ ಕಿಟ್‌, ಆಹಾರದ ಕಿಟ್‌ ವಿತರಣೆ, ಉಚಿತವಾಗಿ ಲಸಿಕೆ ಅಭಿಯಾನ ಸೇರಿದಂತೆ ₹ 100 ಕೋಟಿಯವರೆಗೂ ಯೋಜನೆ ಹಮ್ಮಿಕೊಂಡಿದೆ. ಯುವ ಕಾಂಗ್ರೆಸ್‌ ಸದಸ್ಯರು ರಾಜ್ಯದ ಉದ್ದಗಲಕ್ಕೂ ಜನರ ಸೇವೆಗೆ ನಿಂತಿದ್ದಾರೆ ಎಂದು ಶಿವಕುಮಾರ್‌ ಹೇಳಿದರು.

160 ಕ್ಷೇತ್ರಗಳಲ್ಲಿ ಕೋವಿಡ್‌ ಆರೈಕೆ ಕೇಂದ್ರ, ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯದಲ್ಲಿ 150 ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಲಸಿಕೆಗಾಗಿ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ನೆರವಾಗುತ್ತಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ, ಶಾಸಕ ವಿ. ಮುನಿಯಪ್ಪ, ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಮಂಜುನಾಥ ಗೌಡ, ಎನ್‌ಎಸ್‌ಯುಐ ರಾಜ್ಯ ಘಟಕದ ಉಪಾಧ್ಯಕ್ಷ ಜಯಂದರ್‌ ಸಾಹಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.