ADVERTISEMENT

ವರ್ಷ ಇಡೀ ಹೋರಾಟಕ್ಕೆ ಸಜ್ಜು: ಡಿ.ಕೆ.ಶಿವಕುಮಾರ್‌

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 21:10 IST
Last Updated 8 ಜನವರಿ 2021, 21:10 IST
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಪ್ರಮುಖ ನಾಯಕರು ವೇದಿಕೆಯ ಮುಂಭಾಗದಲ್ಲಿ ಕುಳಿತು ಪಕ್ಷದ ಸ್ಥಳೀಯ ಮುಖಂಡರ ಮಾತು ಆಲಿಸುತ್ತಿರುವುದು– ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕ ಡಾ.ಜಿ. ಪರಮೇಶ್ವರ್‌ ಸೇರಿದಂತೆ ಪ್ರಮುಖ ನಾಯಕರು ವೇದಿಕೆಯ ಮುಂಭಾಗದಲ್ಲಿ ಕುಳಿತು ಪಕ್ಷದ ಸ್ಥಳೀಯ ಮುಖಂಡರ ಮಾತು ಆಲಿಸುತ್ತಿರುವುದು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಮುಂದಿನ ಒಂದು ವರ್ಷ ಕಾಂಗ್ರೆಸ್‌ ‌ನಿರಂತರ ಪ್ರತಿಭಟನೆಗಳನ್ನು ನಡೆಸಲಿದೆ. ಮತಗಟ್ಟೆ ಹಂತದಿಂದ ರಾಜ್ಯಮಟ್ಟದವರೆಗೂ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಕಟಿಸಿದರು.

ನಗರದಲ್ಲಿ ಗುರುವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಸಂಕಲ್ಪ ಸಮಾವೇಶದ ನಡುವೆಯೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಸಂಸ್ಥಾಪನಾ ದಿನವಾದ ಜನವರಿ 28ರಂದು ರಾಜ್ಯವ್ಯಾಪಿ ಹೋರಾಟ ಆರಂಭವಾಗಲಿದೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಶಾಸಕರು, ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ಎಲ್ಲ ಹಂತದ ನಾಯಕರೂ ಕಾರ್ಯಕರ್ತರ ಜತೆ ಬೀದಿಗಿಳಿದು ಹೋರಾಟ ಮಾಡುತ್ತೇವೆ’ ಎಂದರು.

ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ನೆರವಿಗೆ ಬರಬೇಕಿದ್ದ ಸರ್ಕಾರ ನಿರಂತರವಾಗಿ ಜನರ ಮೇಲೆ ತೆರಿಗೆ, ಶುಲ್ಕ ಹೆಚ್ಚಳದ ಹೊರೆ ಹೊರಿಸುತ್ತಿದೆ. ಕೊರೊನಾ ಹೆಸರಿನಲ್ಲಿ ಸರ್ಕಾರಿ ಬೊಕ್ಕಸದ ಲೂಟಿ ನಡೆಯುತ್ತಿದೆ. ಪೊಲೀಸ್‌ ಠಾಣೆಗಳು ಮತ್ತು ಸರ್ಕಾರಿ ಕಚೇರಿಗಳನ್ನು ಬಿಜೆಪಿ ಕಚೇರಿಗಳನ್ನಾಗಿ ಪರಿವರ್ತಿಸಿಕೊಂಡಿದ್ದು, ಇತರ ಪಕ್ಷಗಳ ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಸರ್ಕಾರದ ವೈಫಲ್ಯ, ಸುಲಿಗೆ, ಬೆದರಿಕೆ ರಾಜಕಾರಣದ ವಿರುದ್ಧ ರಾಜ್ಯದಾದ್ಯಂತ ಬೀದಿಗಿಳಿಯಲಾಗುವುದು. ಪೊಲೀಸ್‌ ಠಾಣೆಗಳ ಎದುರಿನಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ADVERTISEMENT

ಹೊಸ ತಂಡಗಳ ರಚನೆ: ಮತಗಟ್ಟೆ ಹಂತದಿಂದ ಜಿಲ್ಲಾ ಸಮಿತಿಗಳವರೆಗೆ ಎಲ್ಲ ಹಂತಗಳಲ್ಲಿ ಹೊಸ ತಂಡಗಳನ್ನು ರಚಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 60 ಸದಸ್ಯರನ್ನು ಒಳಗೊಂಡ ‘ಪ್ರಜಾ ಪ್ರತಿನಿಧಿ ತಂಡ’ ರಚಿಸಲಾಗುವುದು. ಎಲ್ಲ ಹಂತಗಳಲ್ಲಿ ಸಹಕಾರ, ಸಾಂಸ್ಕೃತಿಕ ಮತ್ತು ಸಾರ್ವಜನಿಕ ದೂರು ಘಟಕಗಳನ್ನು ರಚಿಸಲಾಗುವುದು. ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಸಭೆಗಳನ್ನು ಪಕ್ಷದ ಕಚೇರಿಗಳಲ್ಲೇ ನಡೆಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಶಿವಕುಮಾರ್‌ ತಿಳಿಸಿದರು.

ನೈತಿಕ ಹೊಣೆ ಹೊರಲಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧದ ಕ್ರಮ ಡಿನೋಟಿಫೈ ಪ್ರಕರಣದ ತನಿಖೆ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿರುವುದರಿಂದ ಅವರು ನೈತಿಕ ಹೊಣೆ ಹೊತ್ತು ನಿರ್ಧಾರ ಕೈಗೊಳ್ಳಬೇಕು. ಈ ವಿಚಾರದಲ್ಲೂ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಾನು ತಟಸ್ಥ ನಿಲುವು ತಾಳಿದ್ದು, ಯಾರನ್ನೂ ಬೆಂಬಲಿಸುತ್ತಿಲ್ಲ. ಎಲ್ಲ ಅಭ್ಯರ್ಥಿಗಳ ಜತೆ ಒಂದು ಸಭೆ ನಡೆಸಿ, ಪಕ್ಷದ ಚುನಾವಣಾ ಸುತ್ತಿನ ಕುರಿತು ಮಾತನಾಡಿದ್ದೇನೆ’ ಎಂದರು.

ಶಾಸಕ ರಾಮಲಿಂಗಾ ರೆಡ್ಡಿ ಮತ್ತು ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್‌. ಸುದರ್ಶನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಮುಖಂಡರ ಮಾತು ಆಲಿಸಿದರು

ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಕಾಂಗ್ರೆಸ್‌ ಮುಖಂಡರ ಸಂಕಲ್ಪ ಸಮಾವೇಶದಲ್ಲಿ ಪಕ್ಷದ ಬ್ಲಾಕ್‌ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಮಾತುಗಳನ್ನು ಆಲಿಸುವುದಕ್ಕೆ ಆದ್ಯತೆ ನೀಡಲಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕೆಲವೇ ನಾಯಕರ ಭಾಷಣಕ್ಕೆ ಅವಕಾಶವಿತ್ತು.

ಉದ್ಘಾಟನಾ ಸಮಾರಂಭದ ಬಳಿಕ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಕುಮಾರ್‌, ‘ನಾವು ಅಧಿಕಾರಕ್ಕೆ ಬರುವುದಕ್ಕಿಂತಲೂ ನಿಮಗೆ ಅಧಿಕಾರ ನೀಡುವುದು ಮುಖ್ಯ. ಅದಕ್ಕೆಂದೇ ಹೋರಾಟ ರೂಪಿಸಲಾಗುತ್ತಿದೆ’ ಎಂದರು.

ಮಾತನಾಡುವ ಒಬ್ಬರ ಹೊರತಾಗಿ ಬೇರಾರೂ ವೇದಿಕೆಯ ಮೇಲೆ ಬರದಂತೆ ನಿಯಂತ್ರಿಸಲಾಗಿತ್ತು. ಎಲ್ಲ ನಾಯಕರೂ ವೇದಿಕೆಯ ಎದುರು ದಿನವಿಡೀ ಕುಳಿತು ಪಕ್ಷದ ಸ್ಥಳೀಯ ಮುಖಂಡರ ಮಾತು ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.