ADVERTISEMENT

Congress Power Struggle: ಮನಿ ಪವರ್‌ ಬಳಸಿ ಕುದುರೆ ವ್ಯಾಪಾರ; ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 11:19 IST
Last Updated 13 ಜುಲೈ 2025, 11:19 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಯಾಗಬೇಕೆಂದು ಡಿ.ಕೆ. ಶಿವಕುಮಾರ್‌ ಅವರು, ಶಾಸಕರು ತಮ್ಮ ಪರವಾಗಿದ್ದಾರೆ ಎಂದು ತೋರಿಸಿಕೊಳ್ಳಲು ಮನಿ ಪವರ್‌ ಬಳಸಿ ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

‘55 ಶಾಸಕರ ಪಟ್ಟಿ ಹಿಡಿದುಕೊಂಡು ಬಿಜೆಪಿ ಇಡಿ ಹೆಸರಲ್ಲಿ ಬೆದರಿಕೆಯೊಡ್ಡಿ ಆಪರೇಷನ್‌ ಕಮಲಕ್ಕೆ ಮುಂದಾಗಿದೆ’ ಎನ್ನುವ ಕಾಂಗ್ರೆಸ್‌ ಶಾಸಕ ವಿಜಯಾನಂದ ಕಾಶಪ್ಪನವರ್‌ ಹೇಳಿಕೆಗೆ ಭಾನುವಾರ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಅವರದ್ದೇ ಶಾಸಕರ ಖರೀದಿ ನಡೆಯುತ್ತಿದೆ. ಇದು ಹೊರಗೆ ಬರಬಾರದು ಎಂದು, ಜನತೆಯ ದಿಕ್ಕುತಪ್ಪಿಸಲು ಕಾಶಪ್ಪನವರ್‌ ಸುಳ್ಳು ಆರೋಪ ಮಾಡಿದ್ದಾರೆ. ಅವ್ಯವಹಾರ ನಡೆಸಿದವರು ಮಾತ್ರ ಇಡಿ(ಜಾರಿ ನಿರ್ದೇಶನಾಲಯ) ದಾಳಿಗೆ ಹೆದರಬೇಕು. ಕಾಶಪ್ಪನವರ್‌ ಅಂತಹ ತಪ್ಪು ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಡಿ.ಕೆ. ಶಿವಕುಮಾರ್‌ಗೆ ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಕ್ಕೆ, ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ನಡೆದಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಒಬ್ಬರಿಗೊಬ್ಬರು ಸ್ಪರ್ಧೆಗೆ ಬಿದ್ದವರಂತೆ, ತಮ್ಮ ಸಾಮರ್ಥ್ಯ ಹೈಕಮಾಂಡ್‌ ಎದುರು ಪ್ರದರ್ಶಿಸಲು ಹಣ ನೀಡಿ ಶಾಸಕರನ್ನು ಖರೀದಿಸುತ್ತಿದ್ದಾರೆ. ಅವರಲ್ಲಿ ವ್ಯಾಪಾರ ಮಾಡುವವರು ಮತ್ತು ಕೊಳ್ಳುವವರು ಬಲಾಢ್ಯರಾಗಿದ್ದಾರೆ. ವ್ಯಾಪಾರಕ್ಕೂ ಕುದುರೆಗಳು ಮತ್ತು ವಸ್ತುಗಳು ಸಿದ್ಧವಾಗಿ, ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ’ ಎಂದು ಗೇಲಿ ಮಾಡಿದರು.

ADVERTISEMENT

‘ರಾಜ್ಯದ ಜನತೆ ಕಾಂಗ್ರೆಸ್‌ಗೆ ಬಹುಮತ ನೀಡಿ ಸರ್ಕಾರ ನಡೆಸಲು ಅವಕಾಶ ನೀಡಿದೆ. ಅವರು ಐದು ವರ್ಷ ಸಂಪೂರ್ಣ ಆಡಳಿತ ನಡೆಸಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವರ ನಡುವೆಯೇ ಕಚ್ಚಾಟ ನಡೆದಿದೆ. 2019ರಲ್ಲಿ ಸರ್ಕಾರ ನಡೆಸಲು ನಮಗೆ ಒಂಬತ್ತು ಶಾಸಕರ ಅಗತ್ಯವಿತ್ತು. ಆಗ, ಬೇರೆ ಪಕ್ಷದ ಶಾಸಕರು ನಮಗೆ ಕೈ ಜೋಡಿಸಿದರು. ಇದೀಗ, ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ಕಾಂಗ್ರೆಸ್‌ನ್ನು ನಿಯಂತ್ರಿಸಲಾಗದೆ, ಯಾರಿಗೆ ಹೆಚ್ಚು ಶಾಸಕರ ಬೆಂಬಲವಿದೆಯೋ ಅವರು ಮುಖ್ಯಮಂತ್ರಿ ಎನ್ನುವ ಸ್ಥಿತಿಗೆ ಬಂದು ಮುಟ್ಟಿದೆ. ಅದಕ್ಕಾಗಿ, ಹೀಗೆಲ್ಲ ನಡೆಯುತ್ತಿದೆ’ ಎಂದು ಜೋಶಿ ವ್ಯಂಗ್ಯವಾಡಿದರು.

‘ಅಧಿಕಾರಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದ ಆಡಳಿತದಲ್ಲಿ ದುಷ್ಪರಿಣಾಮ ಬೀರುದ್ದು, ಕಾಂಗ್ರೆಸ್‌ ಹೈಕಮಾಂಡ್‌ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದಿನದಿಂದ ಇದನಕ್ಕೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಶಾಸಕರು ತಾವೇ ಪ್ರಭುಗಳು ಎನ್ನುವ ಬೇಕಾಬಿಟ್ಟಿಯಾಗಿ, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ವರ್ಗಾವಣೆ ಹೆಸರಲ್ಲಿ ಲೂಟಿ ನಡೆಯುತ್ತಿದೆ. ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳಲು ಸರ್ಕಾರದಲ್ಲಿ ಹಣವಿಲ್ಲದೆ, ಜನಸಾಮಾನ್ಯರು ಪರದಾಡುವಂತಾಗಿದೆ’ ಎಂದರು.

75 ವರ್ಷವಾದವರು ನಿವೃತ್ತಿಯಾಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಅವರು ಸಾಮಾನ್ಯವಾಗಿ ಹೇಳಿದ್ದ ಹೇಳಿಕೆಯನ್ನೇ, ಕೆಲವರು ಪ್ರಧಾನಿ ಮೋದಿ ರಾಜೀನಾಮೆಗೆ ಹೋಲಿಕೆ ಮಾಡುತ್ತಿದ್ದಾರೆ.
–ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.