ADVERTISEMENT

JDS ವಿರುದ್ಧ ಕಾಂಗ್ರೆಸ್‌ ಪ್ರತೀಕಾರ: ಪ್ರಜ್ವಲ್‌ ಪರ ಸಿದ್ಧಾರ್ಥ ಲೂಥ್ರಾ ವಾದ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 23:45 IST
Last Updated 1 ಡಿಸೆಂಬರ್ 2025, 23:45 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವ್ಯವಸ್ಥಿತ ರಾಜಕೀಯ ಪಿತೂರಿ ನಡೆದಿದ್ದು, ಆಡಳಿತರೂಢ ಕಾಂಗ್ರೆಸ್‌ ಸರ್ಕಾರವು ಜೆಡಿಎಸ್ ನಾಯಕರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದೆ. ಅದಕ್ಕಾಗಿ ಸಂತ್ರಸ್ತೆಯನ್ನು ಬಳಕೆ ಮಾಡಿಕೊಂಡಿದೆ’ ಎಂದು ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಅರುಹಿದರು.

‘ನನಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ ಜಾಮೀನು ಮಂಜೂರು ಮಾಡಬೇಕು’ ಎಂದು ಕೋರಿ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಜ್ವಲ್ ಪರ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಅವರು, ‘ಸಂತ್ರಸ್ತೆ ಮೂರು ವರ್ಷ ಮೌನವಾಗಿದ್ದರು. ನಂತರ ಪ್ರಜ್ವಲ್‌ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ವೇಳೆ ಪ್ರಜ್ವಲ್‌ ಅವರು ತಮ್ಮ ಮಾಜಿ ಕಾರು ಚಾಲಕ ಕಾರ್ತಿಕ್‌ ವಿರುದ್ಧ ದೂರು ನೀಡಿದ್ದಾರೆ. ಆದರೆ, ಈ ಪ್ರಕರಣದ ತನಿಖೆಯನ್ನು ಸರ್ಕಾರ ಏಕೆ ನಡೆಸಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ಪ್ರಜ್ವಲ್‌ 2024ರ ಏಪ್ರಿಲ್‌ 24ರಂದು ದೇಶ ತೊರೆದಿದ್ದರು. ಅವರು ವಿದೇಶಕ್ಕೆ ತೆರಳುವಾಗ ಎಫ್‌ಐಆರ್‌ ದಾಖಲಾಗಿರಲಿಲ್ಲ. ಏಪ್ರಿಲ್‌ 28ರಂದು ದಾಖಲಾಗಿದೆ. 2024ರ ಮೇ ನಲ್ಲಿ ಪ್ರಜ್ವಲ್‌ ಸ್ವದೇಶಕ್ಕೆ ಮರಳಿದಾಗ ಅವರನ್ನು ಬಂಧಿಸಲಾಗಿದೆ. ಅವರು ತಮ್ಮ ಆ್ಯಪಲ್‌ ಐ ಫೋನ್‌ ಅನ್ನು ತನಿಖಾಧಿಕಾರಿಗೆ ನೀಡಿಲ್ಲ ಎಂದು ಹೇಳಲಾಗಿದೆ. ಆದರೆ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 91ರ ಅಡಿಯಲ್ಲಿ ಮೊಬೈಲ್‌ ಒಪ್ಪಿಸುವಂತೆ ಪ್ರಜ್ವಲ್‌ಗೆ ಯಾವುದೇ ನೋಟಿಸ್‌ ನೀಡಿಲ್ಲ. ಐಎಂಇಐ (ಇಂಟರ್‌ನ್ಯಾಷನಲ್‌ ಮೊಬೈಲ್‌ ಎಕ್ವಿಪ್‌ಮೆಂಟ್‌ ಐಡೆಂಟಿಟಿ) ನಂಬರ್‌ ಆಧರಿಸಿ ಮೊಬೈಲ್‌ ಕಂಪನಿಯಿಂದ ಮಾಹಿತಿ ಪಡೆಯುವುದಕ್ಕೂ ಪೊಲೀಸರು ಯತ್ನಿಸಿಲ್ಲ’ ಎಂದರು.

‘ಪ್ರಜ್ವಲ್‌ ಎಸಗಿದ್ದಾರೆ ಎನ್ನಲಾದ ಅಶ್ಲೀಲ ಕೃತ್ಯದ ಆಯ್ದ ವಿಡಿಯೊಗಳನ್ನು ಮಾತ್ರವೇ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. 2025ರ ಮೇ 2ರಿಂದ ಜೂನ್‌ 20ರವರೆಗೆ 13 ಸಾಕ್ಷ್ಯಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇವುಗಳಲ್ಲಿ ಐದನ್ನು ಪುನರ್‌ ವಿಚಾರಣೆಗೆ ಒಳಪಡಿಸಲಾಗಿದೆ. ಜುಲೈ 18ರಂದು ಅಂತಿಮ ವಿಚಾರಣೆ ಮುಗಿದಿದೆ. ಒಟ್ಟಾರೆ 90 ದಿನಗಳಲ್ಲಿ ವಿಚಾರಣೆ ಮುಕ್ತಾಯಗೊಳಿಸಲಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶರು 10 ದಿನ ರಜೆ ಇದ್ದರು. 12 ದಿನ ಸಾರ್ವತ್ರಿಕ ರಜೆ ಇತ್ತು. ಹೀಗಿರುವಾಗ, ಪ್ರಜ್ವಲ್‌ ವಿಚಾರಣೆ ವಿಳಂಬಗೊಳಿಸಿದ್ದಾರೆ ಎಂದು ಹೇಳುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಕ್ಲುಪ್ತವಾದ ಮತ್ತು ಶಿಕ್ಷೆ ಅಮಾನತು ಕೋರಿಕೆಗೆ ಸೀಮಿತವಾದ ಲಿಖಿತ ಸಾರಾಂಶ ಪ್ರತಿಗಳನ್ನು ಸಲ್ಲಿಸಿ’ ಎಂದು ಉಭಯ ಪಕ್ಷಕಾರರಿಗೆ ಸೂಚಿಸಿ, ವಿಚಾರಣೆಯನ್ನು ಇದೇ 3ಕ್ಕೆ ಮುಂದೂಡಿತು.

ಸಿದ್ಧಾರ್ಥ ಲೂಥ್ರಾ

ಪೆಟ್ಟಿಕೋಟ್‌ ಸಂತ್ರಸ್ತೆಗೆ ಸೇರಿದ್ದಲ್ಲ..!

‘ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿಗಳು ವಶಪಡಿಸಿಕೊಂಡು ಸಾಕ್ಷ್ಯವೆಂದು ಪರಿಗಣಿಸಲಾಗಿರುವ ಪೆಟ್ಟಿಕೋಟ್‌ (ಒಳಲಂಗ) ಸಂತ್ರಸ್ತೆಗೆ ಸೇರಿದ್ದಲ್ಲ’ ಎಂದು ಸಿದ್ಧಾರ್ಥ ಲೂಥ್ರಾ ನ್ಯಾಯಪೀಠಕ್ಕೆ ಅರುಹಿದರು.

‘ಗನ್ನಿಕಡದ ಫಾರಂ ಹೌಸ್‌ನಲ್ಲಿ ವಶಪಡಿಸಿಕೊಂಡ ಪೆಟ್ಟಿಕೋಟ್‌ ಸಂತ್ರಸ್ತೆಗೆ ಸೇರಿದ್ದಲ್ಲ. ಪೊಲೀಸರು ಬಟ್ಟೆಯನ್ನು ವಶಕ್ಕೆ ಪಡೆದಿರುವುದೇ ಸಂಶಯಾಸ್ಪದವಾಗಿದೆ’ ಎಂದು ಆರೋಪಿಸಿದರು. ಈ ವಾದವನ್ನು ಅಲ್ಲಗಳೆದ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್ ‘ಅಶ್ಲೀಲ ವಿಡಿಯೊದಲ್ಲಿರುವ ದೃಶ್ಯಕ್ಕೆ ಪ್ರಜ್ವಲ್‌ ರೇವಣ್ಣ ಅವರ ಜನನಾಂಗ  ಹೊಂದಿಕೆಯಾಗಿದೆ.

ಸಂತ್ರಸ್ತೆಯ ಬಟ್ಟೆಯ ಮೇಲಿನ ಡಿಎನ್‌ಎ ಮತ್ತು ಪ್ರಜ್ವಲ್‌ ಡಿಎನ್‌ಎ ಹೊಂದಾಣಿಕೆ ಆಗಿದೆ. ಕೃತ್ಯ ನಡೆಸಿದ್ದಕ್ಕೆ ಬಲವಾದ ಡಿಜಿಟಲ್‌ ಸಾಕ್ಷ್ಯವಿದೆ. ಆದರೆ ಇದ್ಯಾವುದನ್ನೂ ಪ್ರಜ್ವಲ್‌ ಪರ ವಕೀಲರು ಅಲ್ಲಗಳೆದಿಲ್ಲ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.