ಕಾಂಗ್ರೆಸ್
ಹಾವೇರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಒಂದು ಸಾವಿರ ದಿನಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಫೆ. 14ರಂದು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, 2.76 ಲಕ್ಷ ಚದರ ಅಡಿ ಜಾಗದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದೆ. ಇದೇ ಸಮಾವೇಶದಲ್ಲಿ ರಾಜ್ಯದ 1.10 ಲಕ್ಷ ಮಂದಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದ ಮಧ್ಯಭಾಗದಲ್ಲಿರುವ ಹಾವೇರಿ ಜಿಲ್ಲೆಗೆ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಬಂದು ಹೋಗಲು ಅನುಕೂಲವಿದೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದ ಬಯಲು ಜಾಗದಲ್ಲಿ ಈ ಸಮಾವೇಶ ಆಯೋಜಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದ ಸಮೀಪದಲ್ಲಿಯೇ ಬಸ್‌ಗಳು, ಖಾಸಗಿ ವಾಹನಗಳು, ಕಾರುಗಳು, ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ.
‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಹೆಸರಿನಲ್ಲಿ ದ್ವಾರಬಾಗಿಲು ನಿರ್ಮಿಸಲಾಗಿದೆ. 70 ಸಾವಿರ ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. 1.50 ಲಕ್ಷ ಮಂದಿಗೆ ಲಡ್ಡು, ಪಲಾವ್, ಮೊಸರು ಅನ್ನದ ಊಟ ಇರಲಿದೆ. ಇದಕ್ಕಾಗಿ 120 ಕೌಂಟರ್‌ಗಳನ್ನು ತೆರೆಯಲಾಗಿದೆ. ಜನರು, ಪೊಲೀಸರು, ಅಧಿಕಾರಿಗಳಿಗೆ ಪ್ರತ್ಯೇಕ ವ್ಯವಸ್ಥೆಯಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು, ಶಾಸಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕರು ಬರುವ ನಿರೀಕ್ಷೆಯಿದೆ. ಇವರ ಪ್ರಯಾಣಕ್ಕಾಗಿ ಹಿಮ್ಸ್ (ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆವರಣದಲ್ಲಿ ಹೆಲಿಪ್ಯಾಡ್‌ಗಳ ವ್ಯವಸ್ಥೆ ಮಾಡಲಾಗಿದೆ.
ಸಮಾವೇಶದ ಭದ್ರತೆಗಾಗಿ ಹಾವೇರಿ ಜಿಲ್ಲೆ ಪೊಲೀಸರ ಜೊತೆಯಲ್ಲಿ ಶಿವಮೊಗ್ಗ, ಚಿತ್ರದುರ್ಗ, ಮಂಗಳೂರು, ಬೆಂಗಳೂರು, ಬೆಳಗಾವಿ ಜಿಲ್ಲೆ ಪೊಲೀಸರನ್ನು ನಿಯೋಜಿಸಲಾಗಿದೆ.
‘ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿ ವರ್ಷಗಟ್ಟಲೇ ವಾಸವಿದ್ದರೂ ಮಾಲೀಕ ಹಕ್ಕಿನಿಂದ ವಂಚಿತರಾಗಿದ್ದ 1.10 ಲಕ್ಷ ಫಲಾನುಭವಿಗಳಿಗೆ ಸಮಾವೇಶದಲ್ಲಿ ಹಕ್ಕು ಪತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಸಮಾವೇಶಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಸಂಚಾರ, ಆಸನ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ಸಮಾವೇಶಕ್ಕೆ ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇರುವುದರಿಂದ ಸುಗಮ ಸಂಚಾರ ಹಾಗೂ ಭದ್ರತೆಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಸ್ಥಳದ ಮೇಲೆ ನಿಗಾ ವಹಿಸಲು 60 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ
ಯಶೋಧಾ ವಂಟಗೋಡಿ, ಜಿಲ್ಲಾ ಎಸ್.ಪಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.