ಮೈಸೂರು: ‘ಅಧಿಕಾರಕ್ಕಾಗಿ ನಡೆಯುತ್ತಿರುವ ಬೆಳೆವಣಿಗೆಗಳನ್ನು ಗಮನಿಸಿದರೆ, ಕಾಂಗ್ರೆಸ್ ಮನೆಗೆ ಎಷ್ಟು ಬಾಗಿಲುಗಳಿವೆ ಎಂಬುದೇ ಗೊತ್ತಾಗುತ್ತಿಲ್ಲ. ಒಬ್ಬೊಬ್ಬರದು ಒಂದೊಂದು ದಿಕ್ಕು, ಒಂದೊಂದು ಬಾಗಿಲಾಗಿದೆ. ಎಲ್ಲವೂ ಛಿದ್ರವಾಗಿ ಹೋಗಿದೆ’ ಎಂದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ದೂರಿದರು.
ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ದಿಕ್ಕು–ದೆಸೆ ಇಲ್ಲದಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಭ್ರಷ್ಟರೂ ಆಗಿಹೋಗಿದ್ದಾರೆ. ಅಧಿಕಾರದ ಹುಚ್ಚು ಹಾಗೂ ದರ್ಪ ಎರಡೂ ಅವರಿಗೆ ಹೆಚ್ಚಾಗಿದೆ’ ಎಂದು ಆರೋಪಿಸಿದರು.
‘ಕಾಂಗ್ರೆಸ್‌ನವರು ಜನರು ಕೊಟ್ಟ ಬಹುಮತವನ್ನು ಧಿಕ್ಕರಿಸಿ ಅಧಿಕಾರಕ್ಕಾಗಿ ಚೆಲ್ಲಾಟ ಆಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಕ್ರಾಂತಿ, ಭ್ರಾಂತಿಯಲ್ಲೇ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ. ಇಂತಹ ಲಫಂಗ ಸರ್ಕಾರದ ಬಗ್ಗೆ ಮಾತನಾಡಲು ಬೇಸರ ಆಗುತ್ತದೆ’ ಎಂದು ಹೇಳಿದರು.
‘ನಾನು ನೋಡಿದ ಸಿದ್ದರಾಮಯ್ಯ ಈ ರೀತಿ ಇರಲಿಲ್ಲ. ಅವರೀಗ ಬಹಳ ಬದಲಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಇಂದಿರಾ ಗಾಂಧಿ ಕಾಲದಿಂದಲೂ ಅದೇ ವ್ಯವಸ್ಥೆ ಇದೆ. ಕಳೆದೊಂದು ವರ್ಷದಿಂದ ಕುದುರೆ ವ್ಯಾಪಾರ ಜೋರು ಮಾಡಿಕೊಂಡಿದ್ದಾರೆ. ನಾನೆಷ್ಟು ಖರೀದಿಸಿದೆ ಎಂದು ಸಿದ್ದರಾಮಯ್ಯ ಲೆಕ್ಕ ಹಾಕುತ್ತಿದ್ದರೆ, ತಮ್ಮ ಬಳಿ ಎಷ್ಟು ಕುದುರೆ ಇವೆ ಎಂದು ಮತ್ತೊಂದು ಬಣ ಲೆಕ್ಕ ಹಾಕುತ್ತಿದೆ’ ಎಂದು ಟೀಕಿಸಿದರು.
‘ಕಾಂಗ್ರೆಸ್‌ನ ಈಗಿನ ಸ್ಥಿತಿಯ ಲಾಭವನ್ನು ಬಿಜೆಪಿ ಪಡೆಯುವುದಿಲ್ಲ. ನಮಗೆ ಅದರ ಆಸೆಯೂ ಇಲ್ಲ. ಜನರೇ ಅವರಿಗೆ ಬುದ್ಧಿ ಕಲಿಸಿ ನಮಗೆ ಅಧಿಕಾರ ಕೊಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.