ADVERTISEMENT

5ರಿಂದ ಮನರೇಗಾ ಉಳಿಸಿ ಅಭಿಯಾನ: ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 15:52 IST
Last Updated 27 ಡಿಸೆಂಬರ್ 2025, 15:52 IST
   

ನವದೆಹಲಿ: ಯುಪಿಎ ಸರ್ಕಾರದ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾನೂನನ್ನು ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ ಕಾಂಗ್ರೆಸ್, 'ಮನರೇಗಾ ಬಚಾವೊ ಅಭಿಯಾನ'ವನ್ನು ಜನವರಿ 5ರಿಂದ ರಾಷ್ಟ್ರವ್ಯಾಪಿ ನಡೆಸುವುದಾಗಿ ಪ್ರಕಟಿಸಿದೆ. 

ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನು ಬಡವರಿಂದ ಹಣವನ್ನು ಕಿತ್ತುಕೊಂಡು ಅದಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಗುರಿ ಹೊಂದಿರುವುದರಿಂದ ಬಿಜೆಪಿಯು ಜನರ ಕೋಪವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ನರೇಂದ್ರ ಮೋದಿ ಸರ್ಕಾರವು ತನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಿದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದ ಮಾದರಿಯಲ್ಲೇ ಈ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷ ಹೇಳಿದೆ. 

ರಾಜ್ಯ, ಜಿಲ್ಲಾ, ಮಂಡಲ ಮತ್ತು ಗ್ರಾಮ ಮಟ್ಟದಲ್ಲಿ ಮೆರವಣಿಗೆಗಳು ಮತ್ತು ಇತರ ಕಾರ್ಯಕ್ರಮಗಳ ಮೂಲಕ ಪ್ರತಿಭಟನೆಗಳನ್ನು ನಡೆಸುವ ನಿರ್ಧಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಈ ಸಭೆಯಲ್ಲಿ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

ADVERTISEMENT

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು, ಭಾರತದಲ್ಲಿ ಕ್ರಿಸ್‌ಮಸ್ ಸಮಯದಲ್ಲಿ ಕ್ರೈಸ್ತರ ಮೇಲಿನ ದಾಳಿಗಳು, ಪಕ್ಷದ ಸಾಂಸ್ಥಿಕ ಸಮಸ್ಯೆಗಳು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. 

ರಾಹುಲ್‌ ಗಾಂಧಿ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಖರ್ಗೆ, ‘ಮನರೇಗಾ ರದ್ದು ಮಾಡಿದ್ದಕ್ಕೆ ಜನರು ಕೋಪಗೊಂಡಿದ್ದಾರೆ ಮತ್ತು ಸರ್ಕಾರವು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಬಡವರನ್ನು ಹತ್ತಿಕ್ಕಲು ಹೊಸ ಕಾನೂನು ತರಲಾಗಿದೆ. ಇದರ ವಿರುದ್ಧ ಬೀದಿಗಳಲ್ಲಿ ಮತ್ತು ಸಂಸತ್ತಿನಲ್ಲಿ ಹೋರಾಟ ನಡೆಸಲಾಗುತ್ತದೆ’ ಎಂದರು. 

ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯ ಮೊಟಕುಗೊಳಿಸುವ ಮತ್ತು ಆಯ್ದ ಕೆಲವು ಕಾರ್ಪೊರೇಟ್‌ಗಳಿಗೆ ಲಾಭ ಮಾಡಿಕೊಡುವ ಮೂಲಕ ಅಧಿಕಾರ ಕೇಂದ್ರೀಕರಿಸುವ ಮೋದಿ ಸರ್ಕಾರದ ಹೊಸ ಹುನ್ನಾರ ಇದಾಗಿದೆ ಎಂದು ಖರ್ಗೆ ಕಿಡಿಕಾರಿದರು. 

ಉದ್ಯೋಗ ಖಾತರಿ ಯೋಜನೆಯು ಕೇವಲ ಒಂದು ಯೋಜನೆಯಲ್ಲ, ಸಂವಿಧಾನವು ನೀಡಿದ 'ಕೆಲಸದ ಹಕ್ಕು’ ಎಂದು ಖರ್ಗೆ ಪ್ರತಿಪಾದಿಸಿದರು. 

ಮೋದಿ ಸರ್ಕಾರವು ಮನರೇಗಾ ಕಾಯ್ದೆ ರದ್ದುಗೊಳಿಸಿ ಕೋಟ್ಯಂತರ ಬಡ ಮತ್ತು ದುರ್ಬಲ ಜನರನ್ನು ಅಸಹಾಯಕರನ್ನಾಗಿ ಮಾಡಿದೆ. ಬಡವರ ಬೆನ್ನಿಗೆ ಚೂರಿ ಹಾಕಿದೆ. ಮನರೇಗಾ ರದ್ದುಗೊಳಿಸಿರುವುದು ರಾಷ್ಟ್ರಪಿತ ಮಹಾತ್ಮ ಗಾಂಧಿಗೆ ಮಾಡಿದ ಅವಮಾನ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.