ADVERTISEMENT

ಶಿಕ್ಷಣ ಇಲಾಖೆಯನ್ನೂ ವೋಟ್‌ ಬ್ಯಾಂಕ್‌ ಮಾಡಿದ ಕಾಂಗ್ರೆಸ್‌: ನಾಗೇಶ್‌

​ಪ್ರಜಾವಾಣಿ ವಾರ್ತೆ
Published 24 ಮೇ 2022, 20:09 IST
Last Updated 24 ಮೇ 2022, 20:09 IST
ಬಿ.ಸಿ.ನಾಗೇಶ್‌
ಬಿ.ಸಿ.ನಾಗೇಶ್‌   

ಮೈಸೂರು: ‘1ನೇ ತರಗತಿಯಲ್ಲಿ ದೇಶದ ಧ್ವಜದ ಬಗ್ಗೆ ‘ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ’ ಎಂಬ ಪಾಠವಿತ್ತು. ಅದನ್ನು ಏಕೆ ಕಾಂಗ್ರೆಸ್‌ ಸರ್ಕಾರ ತೆಗೆದು ಹಾಕಿತು? ಬಾವುಟ ಏರುವುದನ್ನು, ಭಾರತ ಏರುವುದನ್ನು ಸಹಿಸಲು ಅವರಿಗೆ ಆಗಲಿಲ್ಲವೇ? ಯಾವ ನೈತಿಕತೆ ಇಟ್ಟುಕೊಂಡು ಸಿದ್ದರಾಮಯ್ಯ ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ’ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಗುಡುಗಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಬರೀ ತಪ್ಪು ಹಾಗೂ ಏಕಮುಖ ವಿಚಾರವನ್ನು ಪಠ್ಯದಲ್ಲಿ ಮುದ್ರಿಸಿದರೆ ಶಿಕ್ಷಣ ವ್ಯವಸ್ಥೆ ಬಗ್ಗೆ ಮಕ್ಕಳಿಗೆ ಅಸೂಯೆ ಬರುತ್ತದೆ, ನಂಬಿಕೆ ಕಳೆದುಕೊಳ್ಳುತ್ತಾರೆ. 65 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ನವರು ಶಿಕ್ಷಣ ಇಲಾಖೆಯನ್ನೂ ವೋಟ್‌ ಬ್ಯಾಂಕ್‌ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಹೀಗಾಗಿ, ಅನೇಕ ತಪ್ಪುಗಳು ಪಠ್ಯದಲ್ಲಿ ಉಳಿದುಕೊಂಡಿವೆ’ ಎಂದರು.

‘ಪಠ್ಯದಲ್ಲಿದ್ದ ಕುವೆಂಪು ಅವರ ನಾಲ್ಕು ಪಾಠವನ್ನು ತೆಗೆದು ಹಾಕಿದ್ದಾರೆ. ನಾವು ಸೇರಿಸುವ ಪ್ರಯತ್ನ ಮಾಡಿದ್ದೇವೆ. ಆದರೆ, ಈಗ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು’ ಎಂದುಆಗ್ರಹಿಸಿದರು.

ADVERTISEMENT

‘ಟಿಪ್ಪು ಸುಲ್ತಾನ್‌ ಬಗ್ಗೆ ಪಠ್ಯದಲ್ಲಿ ಹಾಕಿದ್ದಾರೆ. ಈ ದೇಶದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವನು ಅವನೊಬ್ಬನೇನಾ? ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹೋರಾಡಲಿಲ್ಲವೇ? ಹೈದರಾಲಿ, ಟಿಪ್ಪು ಸುಲ್ತಾನ್‌ನಿಂದ ಮೈಸೂರು ಮಹಾರಾಜರಿಗೆ ಹಾಗೂ ಕನ್ನಡ ಭಾಷೆಗೆ ಅನ್ಯಾಯವಾಗಿದೆ. ಆ ವಿಚಾರ ಏಕೆ ಪಠ್ಯದಲ್ಲಿ ಇಲ್ಲ’ ಎಂದುಪ್ರಶ್ನಿಸಿದರು.

ರೋಹಿತ್‌ ಚಕ್ರತೀರ್ಥ ನಾಡಗೀತೆಗೆ ಅವಮಾನ ಮಾಡಿರುವ ಬಗ್ಗೆ, ‘ಸಿದ್ದರಾಮಯ್ಯ ಹಾಕಿರುವ ಟ್ವೀಟ್‌ ಓದಿ. 2016ರಲ್ಲಿ ನಡೆದಿರುವ ಘಟನೆ ಇದು. ಕಾಂಗ್ರೆಸ್‌ ಸರ್ಕಾರವೇ ಪ್ರಕರಣ ದಾಖಲಿಸಿ ಆಮೇಲೆ ‘ಬಿ’‌ ವರದಿ ನೀಡಿತ್ತು. ತಪ್ಪಾಗಿದ್ದರೂ ಏಕೆ ಕಾನೂನು ಕ್ರಮ ಕೈಗೊಳ್ಳಲಿಲ್ಲ? ಏಕೆ ಈಗ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ?ವಾಟ್ಸ್‌ಆ್ಯಪ್‌ನಲ್ಲಿ ಬಂದಿರುವುದನ್ನು ಫಾರ್ವರ್ಡ್‌ ಮಾಡಿರುವುದಾಗಿ ರೋಹಿತ್‌ ಚಕ್ರತೀರ್ಥ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಪ್ರಕರಣ ಗಟ್ಟಿಯಾಗಿ ನಿಲ್ಲಲಿಲ್ಲ’ ಎಂದರು.

‘ತಾನು ಮಾಡಿದ್ದೇ ಸರಿ, ತನಗೆ ಮಾತ್ರ ಗೊತ್ತಿರೋದು ಎನ್ನುವ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಗೌರವ ಕೊಡುವುದಿಲ್ಲ. ಅದು ವ್ಯಕ್ತಿಯ ದುರಹಂಕಾರ ತೋರಿಸುತ್ತದೆ. ಸುಳ್ಳುಗಳ ಕಥೆ ಕಟ್ಟಿ ಸಿದ್ದರಾಮಯ್ಯ ತಲೆಗೆ ತುಂಬುವ ಕೆಲ ವ್ಯಕ್ತಿಗಳು ಅವರ ಜೊತೆಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿಯನ್ನು ನಮ್ಮ ಸರ್ಕಾರ ಒಬ್ಬ ವ್ಯಕ್ತಿ ಕೈಗೆ ಕೊಟ್ಟಿಲ್ಲ‌. ಪುಸ್ತಕ ಮುದ್ರಣಗೊಂಡಿದ್ದು, ಪರಿಷ್ಕರಣೆ ಮಾತೇ ಇಲ್ಲ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.