ADVERTISEMENT

ಕಾಂಗ್ರೆಸ್‌ಗೆ 136 ಸ್ಥಾನ ಖಚಿತ, ಬಿಜೆಪಿ 66-70 ಸ್ಥಾನ ಗೆಲ್ಲಬಹುದು : ಡಿಕೆಶಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 10:35 IST
Last Updated 15 ಡಿಸೆಂಬರ್ 2022, 10:35 IST
   

ಬೆಂಗಳೂರು: ‘ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗೆಲ್ಲುವುದು ಖಚಿತ. ನಮ್ಮ‌ ಸಮೀಕ್ಷೆಯಲ್ಲಿ ಇದು ಸ್ಪಷ್ಟವಾಗಿದೆ. ಬಿಜೆಪಿ 66ರಿಂದ 70 ಸೀಟು ಗೆಲ್ಲಬಹುದು ಅಷ್ಟೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭವಿಷ್ಯ ನುಡಿದರು.

ಮಾಧ್ಯಮ ಸಂವಾದದಲ್ಲಿ ಗುರುವಾರ ಮಾತನಾಡಿದ ಅವರು, ‘ಜೆಡಿಎಸ್ ಎಷ್ಟು ಸ್ಥಾನ ಗೆಲ್ಲಲಿದೆಯೊ ಗೊತ್ತಿಲ್ಲ. ಅದನ್ನು ಆಮೇಲೆ ಹೇಳುತ್ತೇನೆ’ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

‘ಸಿದ್ದರಾಮಯ್ಯ ಮತ್ತು ನಾನು ಕಿತ್ತಾಡಿದ ಸಣ್ಣ ಉದಾಹರಣೆ ತೋರಿಸಿ. ದೆಹಲಿಯ ಯಾವ ನಾಯಕರೂ ನಮ್ಮನ್ನು ಜೊತೆಗೆ ಕುಳ್ಳಿರಿಸಿ ಮಾತನಾಡಿಲ್ಲ. ನಾನು ಕೆಪಿಸಿಸಿ ಅಧ್ಯಕ್ಷ,. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರು. ಪಕ್ಷದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಎಐಸಿಸಿ ನಾಯಕರು ಮಾರ್ಗದರ್ಶನ ಕೊಟ್ಟಿದ್ದಾರೆ’ ಎಂದರು.

ADVERTISEMENT

‘ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಆದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ಮಾಡುತ್ತಿದ್ದಾರೆ’ ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾವು ಕಿತ್ತಾಟ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ವಿರೋಧ ಪಕ್ಷದವರು ಕೂಡ ತಮ್ಮ ಕಿತ್ತಾಟಗಳನ್ನು ಬಿಟ್ಟು ನಮ್ಮ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಅಂದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದಂತೂ ಖಂಡಿತ ಅಂದಂತೆ ಆಯಿತಲ್ಲವೇ?‘ ಎಂದರು.

‘ನಾವು ಸಂವಿಧಾನ ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಆದರೆ, ಇಂದು ಸಂವಿಧಾನಕ್ಕೆ ಕಳಂಕ ಬಂದಿದೆ. ನಾವು ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ, ವಿರೋಧ ಪಕ್ಷದವರು ಭಾವನೆಗಾಗಿ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಇನ್ನು ಕೇವಲ 100 ದಿನಗಳಷ್ಟೇ ಇದೆ.‌ ಅವರ ಸರ್ಕಾರದ‌ ಕೊನೆ ದಿನಗಳು ಹತ್ತಿರ ಬಂದಿದೆ’ ಎಂದರು.

‘ಶೇ 75ನಷ್ಟು ಮಾಧ್ಯಮಗಳು ತಮ್ಮ ಕೆಲಸವನ್ನು ಸಮರ್ಥವಾಗಿ ಮಾಡುತ್ತಿವೆ. ಮಾಧ್ಯಮಗಳು ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿವೆ. ನಾನು ಕೆಪಿಸಿಸಿ ಅಧ್ಯಕ್ಷನಾದ ಮೇಲೆ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿಲ್ಲ. ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನೂರಕ್ಕೆ ನೂರು ಕೆಲಸ ಮಾಡಿದ್ದೇನೆ ಎಂದು ಹೇಳುವುದಿಲ್ಲ’ ಎಂದರು.

‘ಕಾಂಗ್ರೆಸ್ ಪಕ್ಷವನ್ನು ಭ್ರಷ್ಟಾಚಾರದ ಮಾನಸ ಗಂಗೋತ್ರಿ ಎಂದು ಹೇಳುತ್ತಿದ್ದರು. ಹಾಗಾದರೆ ನಮ್ಮ ಗಂಗೋತ್ರಿಯನ್ನು ಬಿಚ್ಚಿ ನೋಡೋಣ‘ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಶಿವಕುಮಾರ್‌, ‘ಮತದಾರರ ದತ್ತಾಂಶ ಕಳವು ಪ್ರಕರಣ ಹೊರಬಂದ ತಕ್ಷಣ ಕುಕ್ಕರ್ ಸ್ಪೋಟ ಆಯಿತು. ಯಾಕೆ? ಕುಕ್ಕರ್ ಸ್ಪೋಟ ಮಾಡುವವನು ಎಲ್ಲಿಂದ ಬಂದ? ಎಂದು ಪ್ರಶ್ನಿಸುವ ಮೂಲಕ ಮತದಾರರ ದತ್ತಾಂಶ ಕಳವು ಪ್ರಕರಣವನ್ನು ಮುಚ್ಚಿ ಹಾಕಲು ಕುಕ್ಕರ್ ಸ್ಪೋಟವನ್ನು ಸರ್ಕಾರ ಬಳಸಿಕೊಂಡಿತು ಎಂದು ಆರೋಪಿಸಿದರು.

‘ಜನರ ಮುಂದೆ ಹೋಗಲು ಬಿಜೆಪಿ ಯಾಕೆ ಭಯ ಪಡುತ್ತಿದೆ? ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ಭಯ ಯಾಕೆ? ಜನರ ಮೇಲೆ ಬಿಜೆಪಿಗೆ ವಿಶ್ವಾಸವಿಲ್ಲ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವರು (ಬಿಜೆಪಿ) 12 ಸ್ಥಾನ ಗೆದಿದ್ದಾರೆ. ನಾವೂ (ಕಾಂಗ್ರೆಸ್‌) 11 ಗೆದ್ದಿದ್ದೇವೆ. ಪದವೀಧರ ಕ್ಷೇತ್ರದ ಉಪ ಚುನಾವಣೆಯಲ್ಲೂ ನಾವು ಗೆದ್ದಿದ್ದೇವೆ. ವಿರೋಧ ಪಕ್ಷ ಇದಕ್ಕಿಂತ ಹೆಚ್ಚಿನ ಸಾಧನೆ ಏನು ಬೇಕು? ಚುನಾವಣೆ ಮಾಡದಿರುವುದಕ್ಕೆಕೋರ್ಟ್ ಕೂಡ ಸರ್ಕಾರಕ್ಕೆ ₹ 5 ಲಕ್ಷ ದಂಡ ಹಾಕಿದೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ಕೊಡುವುದು ಸೂಕ್ತ’ಎಂದರು.

‘ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನೊ, ಗುರುವೊ ಎನ್ನುವುದಕ್ಕೆ ಏನು ದಾಖಲೆ ಇದೆ. ನಾನು 1985ರಿಂದಲೇ ಸಕ್ರಿಯ ರಾಜಕೀಯದಲ್ಲಿದ್ದೇನೆ. ನಾನು ದೇವೇಗೌಡರ ವಿರುದ್ಧವೇ ಸ್ಪರ್ಧೆ ಮಾಡಿದವನು. ಕಾಲೇಜು ದಿನಗಳಿಂದಲೇ ಸಕ್ರಿಯನಾಗಿದ್ದೇನೆ’ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ್ದ ಅವರು, ‘ಕುಮಾರಸ್ವಾಮಿ ಜೊತೆ ಎಷ್ಟೆಂದು ಕುಸ್ತಿ ಮಾಡಲಿ.‌ ಆಗ ಏನೋ ಹುಡುಗ ಇದ್ದೋ ಕುಸ್ತಿ ಮಾಡಿದ್ದೀವಿ. ಈಗ ಕೂದಲು ಎಲ್ಲ ಬೆಳ್ಳಗೆ ಅಗಿದೆ. ಕುಸ್ತಿ ಮಾಡೋಕೆ ಆಗುತ್ತಾ ? ಆದರೆ, ಅವರ ವಿರುದ್ಧ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ‘ ಎಂದರು.

‘ವಲಸಿಗರು ಪಕ್ಷ ಸೇರ್ಪಡೆ ಆಗುತ್ತಾರಾ’ ಎಂಬ ಪ್ರಶ್ನೆ, ‘ಸಂಕ್ರಾಂತಿ ಬರಲಿ ಎಲ್ಲವೂ ಗೊತ್ತಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.