ADVERTISEMENT

ಮತಾಂತರ ನಿಷೇಧ ಮಸೂದೆಗೆ ಕಾಂಗ್ರೆಸ್‌ ವಿರೋಧ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2021, 19:39 IST
Last Updated 9 ಡಿಸೆಂಬರ್ 2021, 19:39 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ರಾಜ್ಯ ಸರ್ಕಾರವು ಒಂದು ಧರ್ಮದವರನ್ನು ಗುರಿಯಾಗಿಟ್ಟುಕೊಂಡು ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿದೆ. ದುರುದ್ದೇಶಪೂರಿತವಾದ ಈ ಮಸೂದೆಯನ್ನು ಕಾಂಗ್ರೆಸ್‌ ವಿರೋಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಈಗಾಗಲೇ ಜಾರಿಯಲ್ಲಿರುವ ಕಾಯ್ದೆಗೆ ದುರುದ್ದೇಶದಿಂದ ತಿದ್ದುಪಡಿ ತರಲು ಬಿಜೆಪಿ ಸರ್ಕಾರ ಮುಂದಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದೆ’ ಎಂದರು.

ಸಂವಿಧಾನದಲ್ಲಿ ಎಲ್ಲ ಧರ್ಮ, ಸಮುದಾಯಗಳಿಗೂ ಸಮಾನ ಗೌರವವಿದೆ. ಭಾರತ ಜಾತ್ಯತೀತ ರಾಷ್ಟ್ರ. ಈ ಕಾರಣಕ್ಕಾಗಿ ಜಗತ್ತಿನಲ್ಲಿ ಭಾರತಕ್ಕೆ ಗೌರವವಿದೆ. ಚರ್ಚ್‌ ಮೇಲೆ ದಾಳಿ ಮಾಡುವುದು, ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ. ಬಿಜೆಪಿ ಸರ್ಕಾರ ಅಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಹಾಗೆ ಮಾಡಿದರೆ ರಾಜ್ಯದ ಗೌರವಕ್ಕೆ ಕುಂದುಂಟಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆಯೂ ಹದಗೆಡುತ್ತದೆ ಎಂದು ಹೇಳಿದರು.

ADVERTISEMENT

ಕ್ರೈಸ್ತ ಧರ್ಮೀಯರು ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ. ಅವರ ಮನಸ್ಸಿಗೆ ನೋವು ಮಾಡುವುದು ಸರಿಯಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.