ಬೆಂಗಳೂರು: ತ್ರಿಚಕ್ರ ವಾಹನ, ಸರ್ಕಾರಿ ಉದ್ಯೋಗ, ನಿಗಮ –ಮಂಡಳಿಯಲ್ಲಿ ಅವಕಾಶ, ಗುತ್ತಿಗೆ ನೌಕರಿ, ವಸತಿ, ದಾಖಲೆಗಳ ವರ್ಗಾವಣೆ, ಆರ್ಥಿಕ ನೆರವು, ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ...
‘ಕೈ’ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿಟ್ಟ ನಾನಾ ಬೇಡಿಕೆಗಳಿವು.
ರಾಜ್ಯದ ವಿವಿಧ ಕಡೆಗಳಿಂದ ಕೆಪಿಸಿಸಿ ಕಚೇರಿಗೆ ಶನಿವಾರ ಬಂದಿದ್ದ ಕಾರ್ಯಕರ್ತರ ಅಹವಾಲುಗಳನ್ನು ಮುಖ್ಯಮಂತ್ರಿ ಆಲಿಸಿದರು. ಅಂಗವಿಕಲರ ಬಳಿಗೇ ಹೋಗಿ ಮನವಿಗಳನ್ನು ಸ್ವೀಕರಿಸಿದರು.
ಕಾರ್ಯಕರ್ತರ ಕೋರಿಕೆ ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮಾಹಿತಿ ಪಡೆದ ಅವರು,ಅಹವಾಲುಗಳನ್ನು ಪಟ್ಟಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಬೇಡಿಕೆ ಈಡೇರಿಸಬೇಕು ಎಂದು ತಮ್ಮ ಸಿಬ್ಬಂದಿಗೆ ನಿರ್ದೇಶನ ನೀಡಿದರು. ತಕ್ಷಣ ಬಗೆಹರಿಸಬಹುದಾದ ಬೇಡಿಕೆಗಳನ್ನು ಕೂಡಲೇ ಬಗೆಹರಿಸಲು ಸ್ಥಳದಲ್ಲೇ ಸೂಚನೆ ನೀಡಿದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ: ನಿಗಮ– ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವಂತೆ ಕೆಲವರು ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟರು.
‘10-12 ನಿಗಮ ಮಂಡಳಿಗಳಿಗೆ ನೇಮಕಾತಿ ಬಾಕಿ ಇದೆ. ಕೆಪಿಸಿಸಿ ಅಧ್ಯಕ್ಷರ ಜೊತೆ ಮಾತನಾಡಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. ನಿಗಮ ಮಂಡಳಿಗಳಿಗೆ ನೇಮಕ ಸಂಬಂಧಿಸಿದ ಅರ್ಜಿಗಳನ್ನು ಜಿ. ಪರಮೇಶ್ವರ ನೇತೃತ್ವದ ಸಮಿತಿಗೆ ನೀಡಲು ಅವರು ಸೂಚಿಸಿದರು.
ಕೆಪಿಸಿಸಿ ಕಚೇರಿ ಸ್ವಚ್ಚತಾ ಸಿಬ್ಬಂದಿಗೆ ಮನೆ: ಕೆಪಿಸಿಸಿ ಕಚೇರಿಯ ಸ್ವಚ್ಛತಾ ಸಿಬ್ಬಂದಿ ಆಶಾ, ಸುಗಂಧಿ, ಜಯಂತಿ, ಅರ್ಚನಾ ಅವರು ಮನೆ ಕೊಡಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿ.ಎಂ, ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗೆ ಕರೆ ಮಾಡಿ ಸ್ವಚ್ಛತಾ ಸಿಬ್ಬಂದಿಯ ದಾಖಲೆ ಪರಿಶೀಲಿಸಿ ಅರ್ಹತೆ ಆಧಾರದಲ್ಲಿ ಮನೆಗಳನ್ನು ನೀಡುವಂತೆ ಸೂಚಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ವಸಂತ ಕುಮಾರ್, ತನ್ವೀರ್ ಸೇಠ್, ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ ಇದ್ದರು.
‘ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆ ಕೊಡಬೇಡಿ’
‘ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕಾರಿಗಳು ಅನಗತ್ಯ ತೊಂದರೆ ಕೊಟ್ಟು ಜಾಗ ಖಾಲಿ ಮಾಡಿಸುತ್ತಿದ್ದಾರೆ’ ಎಂದು ಹುಬ್ಬಳ್ಳಿ–ಧಾರವಾಡ ಬೀದಿ ವ್ಯಾಪಾರಿಗಳ ಕಾಂಗ್ರೆಸ್ ಘಟಕದ ಇಸ್ಮಾಯಿಲ್ ಅವರು ಮುಖ್ಯಮಂತ್ರಿಗೆ ಅಹವಾಲು ಸಲ್ಲಿಸಿದರು.
ಅದಕ್ಕೆ ಗರಂ ಆದ ಸಿದ್ದರಾಮಯ್ಯ ಸ್ಥಳದಿಂದಲೇ ಜಿಲ್ಲಾಧಿಕಾರಿಗೆ ಕರೆ ಮಾಡಿ ‘ಬೀದಿಬದಿ ವ್ಯಾಪಾರಿಗಳ ಜೊತೆ ಮಾನವೀಯವಾಗಿ ವರ್ತಿಸಬೇಕು. ಅವರಿಗೆ ಅನಗತ್ಯ ತೊಂದರೆ ಕೊಡಬಾರದು’ ಎಂದು ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.