ADVERTISEMENT

ಕಾಂಗ್ರೆಸ್ ಇಲ್ಲದಿದ್ದರೆ ಕುಮಾರಸ್ವಾಮಿ ಸಿಎಂ ಆಗುತ್ತಿದ್ದರೇ?: ಮಾಜಿ ಸಚಿವ ಎ.ಮಂಜು

ಅಧಿಕಾರ ಸಿಗದಂತೆ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 16:23 IST
Last Updated 10 ಜನವರಿ 2019, 16:23 IST
ಮಂಜು
ಮಂಜು   

ಹಾಸನ:ಕಾಂಗ್ರೆಸ್ ಮುಖಂಡ ಎ.ಮಂಜು ಅವರು ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

‘ರೈಲ್ವೆ ಮೇಲ್ಸೇತುವೆ ಸೇರಿದಂತೆ ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿ ಬಿಟ್ಟರೆ, ರೇವಣ್ಣ ಹೊಸದನೇನನ್ನೂ ಮಾಡುತ್ತಿಲ್ಲ. ಯಾರೇ ಅಭಿವೃದ್ಧಿ ಕೆಲಸ ಮಾಡಿದರೂ ಅವರ ಮನೆಯಿಂದ ಹಣ ತಂದು ಮಾಡುವುದಿಲ್ಲ. ಇದನ್ನು ಅರಿತು ಕೆಲಸ ಮಾಡಲಿ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಜು ಕುಟುಕಿದರು.

‘ಕೇವಲ ಬಿಲ್ಡಿಂಗ್ ಕಟ್ಟುವುದು ಮಾತ್ರ ಅಭಿವೃದ್ಧಿಯಲ್ಲ. ಇದು ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ರಾಜಕೀಯವೇ ಹೊರತು ಬೇರೇನು ಅಲ್ಲ’ ಎಂದು ಆರೋಪಿಸಿದ ಅವರು, ‘ಸಮ್ಮಿಶ್ರ ಸರ್ಕಾರದ ಆಶಯದಂತೆ ದ್ವೇಷ ರಾಜಕೀಯ ಮಾಡದೆ, ನಮ್ಮ ಅವಧಿಯಲ್ಲಿ ಚಾಲೂ ಪಡೆದ ಯೋಜನೆಗಳನ್ನೂ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ರೇವಣ್ಣ ಅವರು, ಕಾಂಗ್ರೆಸ್‌ನವರಿಗೆ ಅಧಿಕಾರ ಸಿಗದಂತೆ ಇನ್ನಿಲ್ಲದ ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಪಕ್ಷ ಇಲ್ಲದೇ ಇದ್ದರೆ ಕುಮಾರಸ್ವಾಮಿ ಸಿ.ಎಂ ಆಗುತ್ತಿದ್ದರೇ? ರೇವಣ್ಣ ಅವರು ಸಚಿವರಾಗುತ್ತಿದ್ದರೇ’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

‘ನಮ್ಮ ಶಾಸಕರಿಗೆ ಅಧಿಕಾರ ಕೊಡುವುದು ಪಕ್ಷಕ್ಕೆ ಬಿಟ್ಟ ವಿಚಾರ, ಅದನ್ನು ಬಿಟ್ಟು ನಿಗಮ, ಮಂಡಳಿ ನೇಮಕಕ್ಕೆ ತಡೆ ಒಡ್ಡಲು ಅಥವಾ ಬದಲಾವಣೆ ಮಾಡೋಕೆ ಇವರು ಯಾರು?’ ಎಂದು ಖಾರವಾಗಿ ಪ್ರಶ್ನಿಸಿದ ಮಂಜು, ‘ಅವರು 37 ಸ್ಥಾನ ಗೆದ್ದಿದ್ದಾರೆ. ಕುಮಾರಸ್ವಾಮಿ ಬದಲಿಗೆ ಬೇರೆಯವರನ್ನು ಸಿ.ಎಂ ಮಾಡಿ ಎಂದರೆ ಒಪ್ಪುತ್ತಾರಾ’ ಎಂದು ಕೇಳಿದರು.

ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿಆಗಿರುವ ಕಾಂಗ್ರೆಸ್‌ನಗೋಪಾಲಸ್ವಾಮಿ ಅವರು ಸಂಸದೀಯ ಕಾರ್ಯದರ್ಶಿಯಾಗಲು ಕೊಕ್ಕೆ ಹಾಕಿರುವುದಕ್ಕೆ ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಡಿಸಿಎಂ ಪರಮೇಶ್ವರ್ ಬಗ್ಗೆ ರೇವಣ್ಣ ನಯವಾದ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ದಲಿತರಿಗೆ ಅಧಿಕಾರ ಸಿಗುವುದು ಬೇಡ. ಚುನಾವಣೆ ಬಂದಾಗ ಮಾತ್ರ ದಲಿತರ ಜಪ ಮಾಡುತ್ತಾರೆ. ಅವರು ಮನೆಯಿಂದ ಹೊರ ಬರುವಾಗ ಅಕಸ್ಮಾತ್ ದಲಿತರು ಎದುರು ಬಂದರೆ, ಮತ್ತೆ ಮನೆ ಒಳಹೋಗಿ ಸ್ನಾನ ಮಾಡಿ, ದೇವರ ಪೂಜೆ ಮಾಡಿ ಬರುತ್ತಾರೆ. ದಲಿತ ಅಧಿಕಾರಿಗಳು ಆಯಕಟ್ಟಿನ ಸ್ಥಾನದಲ್ಲಿದ್ದರೆ ಎತ್ತಂಗಡಿ ಮಾಡುತ್ತಾರೆ’ ಎಂದು ರೇವಣ್ಣ ವಿರುದ್ಧ ಹರಿಹಾಯ್ದರು.

ಮುಖಂಡರಾದ ಬಿ.ಪಿ.ಮಂಜೇಗೌಡ, ನಾರಾಯಣಗೌಡ, ಮುನಿಸ್ವಾಮಿ, ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.