ADVERTISEMENT

PV–DH, ಸಮಾಜ ಕಲ್ಯಾಣ ಇಲಾಖೆಯ 'ಸಂವಿಧಾನವೇ ಬೆಳಕು' ಅಭಿಯಾನಕ್ಕೆ ಚಾಲನೆ

‘ಸಂವಿಧಾನ ಜಾಗೃತಿ’ ಈ ಹೊತ್ತಿನ ತುರ್ತು: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 15:59 IST
Last Updated 26 ನವೆಂಬರ್ 2025, 15:59 IST
<div class="paragraphs"><p>‘ಸಂವಿಧಾನ ದಿನಾಚರಣೆ’ಯ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಆರಂಭಿಸಿರುವ ‘ಸಂವಿಧಾನವೇ ಬೆಳಕು’ ಅಭಿಯಾನಕ್ಕೆ ಸಚಿವ ಎಚ್‌.ಸಿ.ಮಹದೇವಪ್ಪ ಬುಧವಾರ ಚಾಲನೆ ನೀಡಿದರು.</p></div>

‘ಸಂವಿಧಾನ ದಿನಾಚರಣೆ’ಯ ಅಂಗವಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಆರಂಭಿಸಿರುವ ‘ಸಂವಿಧಾನವೇ ಬೆಳಕು’ ಅಭಿಯಾನಕ್ಕೆ ಸಚಿವ ಎಚ್‌.ಸಿ.ಮಹದೇವಪ್ಪ ಬುಧವಾರ ಚಾಲನೆ ನೀಡಿದರು.

   

ಬೆಂಗಳೂರು: ‘ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ತಿಳಿಸಿ, ಪ್ರಜಾಪ್ರಭುತ್ವದಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ತುರ್ತು’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆರಂಭಿಸಿರುವ ‘ಸಂವಿಧಾನವೇ ಬೆಳಕು’ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. 

ADVERTISEMENT

‘ಸರ್ಕಾರಗಳು ಇಲ್ಲದೇ ಇದ್ದ ಸಂದರ್ಭದಲ್ಲೂ ಪ್ರಜಾಪ್ರಭುತ್ವ ನಡೆಯುತ್ತದೆ. ಆದರೆ ಮಾಧ್ಯಮಗಳು ಇಲ್ಲದೆ ಪ್ರಜಾಪ್ರಭುತ್ವ ಕಾರ್ಯನಿರ್ವಹಿಸದು ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್‌ ಜಾಫರ್‌ಸನ್‌ ಹೇಳಿದ್ದರು. ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದಾಗಲೆಲ್ಲಾ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳು, ಪ್ರಜಾಪ್ರಭುತ್ವವನ್ನು ಬಲಪಡಿಸಲು ಕಾರ್ಯನಿರ್ವಹಿಸಿವೆ’ ಎಂದರು.

‘ಜನರ ಧ್ವನಿಯಾಗಿ ಮಹಾತ್ಮ ಗಾಂಧಿ ಅವರು ಪತ್ರಿಕೆ ತರುತ್ತಿದ್ದರೆ, ಧ್ವನಿಯಿಲ್ಲದವರ ಧ್ವನಿಯಾಗಿ ಬಾಬಾಸಾಹೇಬ ಅಂಬೇಡ್ಕರ್ ಅವರು ಪತ್ರಿಕೆ ನಡೆಸುತ್ತಿದ್ದರು. ಈ ಎರಡೂ ಉದ್ದೇಶಗಳನ್ನು ಒಳಗೊಂಡು, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ಕಾರ್ಯನಿರ್ವಹಿಸಿವೆ. ವಾಕ್‌ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳದೆ, ಪ್ರಜಾಪ್ರಭುತ್ವದ ರಕ್ಷಣೆಗೆ ದುಡಿದಿವೆ’ ಎಂದರು.

‘ಪ್ರಜಾಪ್ರಭುತ್ವಕ್ಕೆ ಈಗ ಅಪಾಯ ಎದುರಾಗಿದೆ. ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣದೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಈ ಹೊತ್ತಿನಲ್ಲಿ, ಈ ಎರಡು ಪತ್ರಿಕೆಗಳು ‘ಸಂವಿಧಾನವೇ ಬೆಳಕು’ ಕಾರ್ಯಕ್ರಮ ಆರಂಭಿಸಿರುವುದು ಸ್ವಾಗತಾರ್ಹ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ, ಜನರ ಭಾಗವಹಿಸುವಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಲಿ’ ಎಂದು ಹೇಳಿದರು.

‘ಸಮೃದ್ಧ, ಸೌಹಾರ್ದ ಮತ್ತು ಭ್ರಾತೃತ್ವ ಭಾರತವನ್ನು ರೂಪಿಸಬೇಕು ಎಂಬುದು ಅಂಬೇಡ್ಕರ್ ಅವರು ಕನಸಾಗಿತ್ತು. ದೇಶದ ಎಲ್ಲ ಪ್ರಜೆಗಳಿಗೆ ಅವರ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ಅರಿವು ಮೂಡಿದಾಗಲಷ್ಟೇ ಇದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ‘ಸಂವಿಧಾನವೇ ಬೆಳಕು’ ಕಾರ್ಯಕ್ರಮವು ಅತ್ಯಂತ ಮಹತ್ವದ್ದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.