ಹೈಕೋರ್ಟ್
ಬೆಂಗಳೂರು: ‘ಸಂರಕ್ಷಿತ ಸ್ಮಾರಕಗಳ ಸುತ್ತಮತ್ತ ಯಾವುದೇ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗದ ಅವಗಾಹನೆಗೆ ಈ ವಿಷಯವನ್ನು ಸುತ್ತೋಲೆ ಹೊರಡಿಸುವ ಮೂಲಕ ಮನದಟ್ಟು ಮಾಡಬೇಕು’ ಎಂದು ಹೈಕೋರ್ಟ್, ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಆದೇಶಿಸಿದೆ.
ಸಂರಕ್ಷಿತ ಸ್ಮಾರಕ ಎಂದು ಘೋಷಿತವಾದ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಈಶಾನ್ಯ ಭಾಗದ 150 ಮೀಟರ್ ಅಂತರದಲ್ಲಿ ಮನೆ ನಿರ್ಮಾಣಕ್ಕೆ ನಿರ್ಬಂಧ ವಿಧಿಸಿ, ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ 2025ರ ಜನವರಿ 28ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡೆನಿಸ್ ಕ್ರಾಸ್ತಾ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡಬೇಕಿದ್ದರೂ ಭಾರತೀಯ ಪುರಾತತ್ವ ಇಲಾಖೆಯಿಂದ (ಎಎಸ್‌ಐ) ನಿರಾಕ್ಷೇಪಣಾ ಪತ್ರ ಪಡೆದಿರಬೇಕು’ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ‘ಕಾನೂನಿಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವುದು ಅಧಿಕಾರಿಗಳನ್ನು ಅಪಾಯಕ್ಕೆ ನೂಕಲಿದೆ ಎಂಬ ಅರಿವನ್ನು ಸುತ್ತೋಲೆ ಒಳಗೊಂಡಿರಬೇಕು. ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಇಲಾಖಾ ತನಿಖೆಗೆ ಆದೇಶಿಸಲಾಗುತ್ತದೆ ಎಂಬ ಅಂಶವನ್ನು ಸುತ್ತೋಲೆಯಲ್ಲಿ ಅಡಕ ಮಾಡಬೇಕು’ ಎಂದು ನ್ಯಾಯಪೀಠ ವಿವರಿಸಿದೆ.
‘ಕಾಯ್ದೆ ಪ್ರಕಾರ ಸಂರಕ್ಷಿತ ಸ್ಮಾರಕಗಳ ಸುತ್ತಮುತ್ತ ಇರುವ ಕಟ್ಟಡಗಳ ಮರು ವಿನ್ಯಾಸ ಮತ್ತು ದುರಸ್ತಿಗೆ ಮಾತ್ರವೇ ಅವಕಾಶ ನೀಡಬಹುದಾಗಿದೆ. ಆದರೆ, ಹಾಲಿ ಪ್ರಕರಣದಲ್ಲಿ ಉದಾಸೀನತೆ ಅಥವಾ ಕಾನೂನಿನ ಅರಿವೇ ಇಲ್ಲದೆ ಅನುಮತಿ ನೀಡಲಾಗಿದೆ. ಇದನ್ನು ನೋಡಿದರೆ ಸಾರ್ವಜನಿಕ ಸೇವಕರು ಕಾನೂನಿನ ಪಾಲಕರಾಗಬೇಕೆ ವಿನಾ ಅದರ ವಿರೋಧಿಗಳಲ್ಲ ಎಂಬುದನ್ನು ಗಾಢವಾಗಿ ಮನಗಾಣಬೇಕು’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
‘ಹಾಲಿ ಪ್ರಕರಣದಲ್ಲಿ ಹೊಸ ಕಟ್ಟಡ ನಿರ್ಮಿಸಲು ಅಧಿಕಾರಿಗಳು ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣಕ್ಕೆ ಆದೇಶಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?: ತಮ್ಮ ಮನೆ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಾಸ್ತಾ ಅವರಿಗೆ ಎಎಸ್‌ಐ ನೋಟಿಸ್ ಜಾರಿಗೊಳಿಸಿತ್ತು. ಕಟ್ಟಡ ನಿರ್ಮಾಣ ಸ್ಥಗಿತಗೊಳಿಸಿ ಎಎಸ್‌ಐನಿಂದ ನಿರಾಕ್ಷೇಪಣಾ ಪತ್ರ ಪಡೆದು ಮುಂದುವರಿಯಲು ಸೂಚಿಸಿತ್ತು. ಅರ್ಜಿದಾರರು ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.