ADVERTISEMENT

‘ಕೈ’ ಕಮಿಷನ್‌ ದುಪ್ಪಟ್ಟು: ಸಿಎಂಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 18:38 IST
Last Updated 27 ಸೆಪ್ಟೆಂಬರ್ 2025, 18:38 IST
ಆರ್‌. ಮಂಜುನಾಥ್‌
ಆರ್‌. ಮಂಜುನಾಥ್‌   

ಬೆಂಗಳೂರು: ‘ಹಿಂದಿನ ಸರ್ಕಾರಕ್ಕಿಂತ ನಿಮ್ಮ ನೇತೃತ್ವದ ಸರ್ಕಾರದಲ್ಲಿ ಬಿಲ್‌ ಪಾವತಿಗೆ ಕಮಿಷನ್‌ ದುಪ್ಪಟ್ಟಾಗಿದೆ’ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ.

‘ತಾವು ವಿರೋಧ ಪಕ್ಷದ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಯಾವುದೇ ಕಮಿಷನ್‌ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದೀರಿ. ಆದರೆ, ಹಿಂದಿನ ಸರ್ಕಾರಕ್ಕಿಂತ ಎಲ್ಲ ಇಲಾಖೆಗಳಲ್ಲೂ ಈಗ ಕಮಿಷನ್‌ ದುಪ್ಪಟ್ಟು ಆಗಿದೆ ಎಂದು ನಿಮ್ಮ ಗಮನಕ್ಕೆ ತರಲು ಸಂಘ ವಿಷಾದ ವ್ಯಕ್ತಪಡಿಸುತ್ತದೆ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ರಾಜ್ಯದಲ್ಲಿ ಹಿಂದಿದ್ದ ಬಿಜೆಪಿ ನೇತೃತ್ವದ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ, ಅಧಿಕಾರಿಗಳು ಹೆಚ್ಚು ಕಮಿಷನ್‌ ಪಡೆಯುತ್ತಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘ 2025ರ ಮಾರ್ಚ್‌ನಲ್ಲಿ ಆರೋಪಿಸಿತ್ತು. ಆಗ ಮುಖ್ಯಮಂತ್ರಿಯವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಏಪ್ರಿಲ್‌ನಲ್ಲಿ ಶೇ 50ರಷ್ಟು ಬಾಕಿ ಬಿಲ್‌ ಬಿಡುಗಡೆ ಮಾಡುವ ಭರವಸೆ ನೀಡಿದ್ದರು.

ADVERTISEMENT

‘ಸುಮಾರು ಎರಡು ವರ್ಷಗಳಿಂದ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಬಿಡುಗಡೆ ವಿಚಾರ ಮತ್ತು ಹಲವು ಸಮಸ್ಯೆಗಳ ಬಗ್ಗೆ ನಿಮ್ಮ ಜೊತೆ ಹಲವು ಬಾರಿ ಸಂಘದ ಪದಾಧಿಕಾರಿಗಳು ಚರ್ಚೆ ಮಾಡಿದ್ದೇವೆ. ನಮ್ಮ ಸಂಘವು ಭ್ರಷ್ಟಾಚಾರದ ವಿರುದ್ಧ ಹೋರಾಡಿದ ಫಲವಾಗಿ, ತಮ್ಮ ಸರ್ಕಾರ ಬರುವುದಕ್ಕೆ ಸ್ವಲ್ಪವಾದರೂ ನಾವು ಕಾರಣಕರ್ತರಾಗಿದ್ದೇವೆ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ’ ಎಂದು ಸಂಘದ ಅಧ್ಯಕ್ಷ ಆರ್‌. ಮಂಜುನಾಥ್‌ ಪತ್ರದಲ್ಲಿ ತಿಳಿಸಿದ್ದಾರೆ.

ಬಾಕಿ ಬಿಲ್‌ ಬಿಡುಗಡೆ ಮಾಡುವುದಾಗಿ ಸಿದ್ದರಾಮಯ್ಯ ಅವರು ಹಲವು ಬಾರಿ ನೀಡಿದ ಭರವಸೆ ಈವರೆಗೂ ಈಡೇರಿಲ್ಲ. ಏಪ್ರಿಲ್‌ನಲ್ಲಿ ಶೇ 50ರಷ್ಟು ಬಾಕಿ ಬಿಲ್‌ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅದೂ ಆಗಿಲ್ಲ
ಆರ್. ಮಂಜುನಾಥ್‌, ಅಧ್ಯಕ್ಷ, ರಾಜ್ಯ ಗುತ್ತಿಗೆದಾರರ ಸಂಘ

‘ನಮ್ಮನ್ನು ಪ್ರತಿ ಬಾರಿ ಸಮಾಧಾನ ಮಾಡಿ, ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೀರಿ. ನಿಮಗೆ ಗೌರವ ಕೊಟ್ಟು, ಅಪಾರ ನಂಬಿಕೆಯಿಂದ ಜಿಲ್ಲೆಗಳ ಎಲ್ಲ ಗುತ್ತಿಗೆದಾರರೂ ಸಮಾಧಾನದಿಂದ ಇದ್ದಾರೆ. ಆದರೆ, ಇದುವರೆಗೆ ನಿಮ್ಮ ಸರ್ಕಾರದಿಂದ ನಮಗೆ ಪ್ರಯೋಜನವಾಗಿಲ್ಲ. ಇಲಾಖೆಗಳ ಸಚಿವರು, ಕಾರ್ಯದರ್ಶಿಗಳನ್ನು ಭೇಟಿ ಮಾಡಿದರೂ ಹಣ ಬಿಡುಗಡೆಯಾಗಿಲ್ಲ’ ಎಂದು ದೂರಿದ್ದಾರೆ.

‘ಜ್ಯೇಷ್ಠತೆ ಮತ್ತು ಪಾರದರ್ಶಕ ಕಾಯ್ದೆ ಅನುಸರಿಸದೆ, ಅವರದೇ ‘ಫಾರ್ಮುಲಾ’ಗಳನ್ನು ತಯಾರಿಸಿಕೊಂಡು, ಸ್ಪೆಷಲ್‌ ಎಲ್‌ಒಸಿ ರೂಪದಲ್ಲಿ ಗುತ್ತಿಗೆದಾರರ ಬಾಕಿ ಹಣದಲ್ಲಿ ಮೂರು ತಿಂಗಳಿಗೊಮ್ಮೆ ಶೇ 15ರಿಂದ ಶೇ 20ರಷ್ಟು ಹಣವನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ’ ಪತ್ರದಲ್ಲಿ ಎಂದು ಆರೋಪಿಸಿದ್ದಾರೆ.‌

‘ಸಿ.ಎಂ ಆದೇಶ ಮೀರಿ ಪ್ಯಾಕೇಜ್‌’

‘ಪೌರಾಡಳಿತ ನಗರಾಭಿವೃದ್ಧಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕಾನೂನು ಹಾಗೂ ನಿಮ್ಮ ಆದೇಶವನ್ನು ಮೀರಿ ಟೆಂಡರ್‌ಗಳನ್ನು ಪ್ಯಾಕೇಜ್‌ ರೂಪದಲ್ಲಿ ಪರಿವರ್ತಿಸಿ ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಪ್ರಕ್ರಿಯೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಸಂಘ ಹಲವು ಬಾರಿ ಪತ್ರ ಹಾಗೂ ಮೌಖಿಕವಾಗಿ ತಿಳಿಸಿದ್ದರೂ ಸಂಬಂಧಪಟ್ಟ ಸಚಿವರು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಮುಖ್ಯಮಂತ್ರಿಯವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ. ಸಚಿವರಾದ ರಹೀಂಖಾನ್‌ ಬೈರತಿ ಸುರೇಶ್ ಸಂತೋಷ್‌ ಲಾಡ್‌ ಅವರಿಗೂ ಇದೇ ವಿಷಯವಾಗಿ ಪತ್ರ ಬರೆಯಲಾಗಿದೆ’ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ ಇಲಾಖೆ; ಎಷ್ಟು ಬಾಕಿ(₹ಕೋಟಿಗಳಲ್ಲಿ)

ಜಲಸಂಪನ್ಮೂಲ : ₹12000

ಲೋಕೋಪಯೋಗಿ : ₹9000

ಪಂಚಾಯತ್‌ ರಾಜ್‌ : ₹3600

ಸಣ್ಣ ನೀರಾವರಿ : ₹3200 

ಕೆಆರ್‌ಐಡಿಎಲ್‌ : ₹3000

ಬಿಬಿಎಂಪಿ : ₹1800

ನಗರಾಭಿವೃದ್ಧಿ : 1200

ವಸತಿ : ₹900

ಕಾರ್ಮಿಕ : ₹800

ಪೌರಾಡಳಿತ : ₹600 

ವಕ್ಫ್‌ : 600

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.