ADVERTISEMENT

ವಿಶ್ವವಿದ್ಯಾಲಯಗಳಿಂದ ಮತಾಂತರ: ರಂಗಕರ್ಮಿ ಪ್ರಸನ್ನ

ಎನ್‌ಎಸ್‌ಎಸ್‌ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 8:32 IST
Last Updated 18 ಜುಲೈ 2022, 8:32 IST
   

ಮೈಸೂರು: ‘ವಿಶ್ವವಿದ್ಯಾಲಯಗಳು ಶ್ರಮ ಜೀವಿಗಳನ್ನು ಸುಲಭ ಜೀವಿಗಳನ್ನಾಗಿ ಮತಾಂತರಗೊಳಿಸುವ ಕಾರ್ಯ ಮಾಡುತ್ತಿವೆ’ ಎಂದು ರಂಗಕರ್ಮಿ ಪ್ರಸನ್ನ ವಿಶ್ಲೇಷಿಸಿದರು.

ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯಿಂದ ಎನ್‌ಎಸ್‌ಎಸ್‌ ಭವನದಲ್ಲಿ ಸೋಮವಾರ ಆಯೋಜಿಸಿದ್ದ 2020–21ನೇ ಸಾಲಿನ ‘ಎನ್‌ಎಸ್‌ಎಸ್‌ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮಲ್ಲಿರುವುದು ಎರಡೇ ಜಾತಿ. ಒಂದು ಸುಲಭ ಜೀವಿಗಳದ್ದು, ಇನ್ನೊಂದು ಶ್ರಮ ಜೀವಿಗಳದ್ದು. ಶ್ರಮಜೀವಿಗಳನ್ನು ಸುಲಭ ಜೀವಿಗಳನ್ನಾಗಿಸುವುದೇ ದೊಡ್ಡ ಸಾಧನೆ ಎಂಬಂತೆ ವಿಶ್ವವಿದ್ಯಾಲಯದವರು ಸೇರಿದಂತೆ ಎಲ್ಲರೂ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇವೆ. ಹೀಗೆ ಮತಾಂತರವಾದವರು ಸುಲಭ ಜೀವನವನ್ನೆ ಇಷ್ಟಪಡುತ್ತಾರೆ; ಶ್ರಮ ಜೀವನದತ್ತ ವಾಪಸಾಗುವುದಿಲ್ಲ. ಶ್ರಮಜೀವಿಗಳನ್ನು ಕೀಳಾಗಿ ನೋಡುವ ಮನೋಭಾವವನ್ನೂ ಬೆಳೆಸಿಕೊಳ್ಳುತ್ತಾರೆ. ಇದನ್ನು ವಿಶ್ವವಿದ್ಯಾಲಯಗಳು ಕಲಿಸುತ್ತಿರುವುದು– ಬೆಳೆಸುತ್ತಿರುವುದು ವಿಷಾದದ ಸಂಗತಿ’ ಎಂದರು.

ADVERTISEMENT

‘ಅಧಿಕೃತ ಕಾರ್ಯಕ್ರಮಗಳಲ್ಲಿ ಸತ್ಯ ಮಾತನಾಡುವುದು‌ ಕಷ್ಟ’ ಎಂದ ಅವರು, ‘ಇವತ್ತಿನ ಸಂದರ್ಭ ಬಹಳ ಅಪಾಯಕಾರಿಯಾದುದಾಗಿದೆ. ನಾವೆರಲ್ಲರೂ ಸುಲಭ ಜೀವಿಗಳಾಗುವ ಅವಸರದಲ್ಲಿ ಇಡೀ ವಿಶ್ವವನ್ನೇ ಅಪಾಯಕ್ಕೆ ಸಿಲುಕಿಸಿದ್ದೇವೆ. ಹೀಗೆಯೇ ಮುಂದುವರಿದರೆ ವಿಶ್ವವೇ ಇರುವುದಿಲ್ಲ. ಇದನ್ನು ವಿಜ್ಞಾನಿಗಳೇ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಸಾಮೂಹಿಕ ಆತ್ಮಹತ್ಯೆಯ ಕಡೆಗೆ:‘ಮನುಕುಲವು ಸಾಮೂಹಿಕ ಆತ್ಮಹತ್ಯೆಯ ಕಡೆಗೆ ಹೊರಟಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ದಾರಿದೀಪ ಆಗಬೇಕಾಗಿದ್ದ ವಿಶ್ವವಿದ್ಯಾಲಯಗಳು ಯಾವ ಪಾತ್ರ‌ ವಹಿಸುತ್ತಿದ್ದೇವೆ? ನಾವೆಲ್ಲರೂ ಪ್ರಕೋಪ ತಡೆಯುತ್ತಿದ್ದೇವೆಯೇ ಅಥವಾ ಮುಂದುವರಿಸುತ್ತಿದ್ದೇವೆಯೇ ಎಂಬ ಆತ್ಮವಿಮರ್ಶೆ ಮಾಡಿಕೊಳ್ಳಬೇಕು’ ಎಂದರು.

‘ಎನ್‌ಎಸ್‌ಎಸ್‌ ತನ್ನ ಮೂಲ ಆಶಯ ತಲುಪುತ್ತಿದ್ದೇವೆಯೇ?’ ಎಂದು ಕೇಳಿದ ಅವರು, ‘ಮೈಸೂರು ವಿಶ್ವವಿದ್ಯಾಲಯವು ಈಗ ಕಟ್ಟಿರುವ ಅಧಿಕೃತ ಕಟ್ಟಡ (ಎನ್‌ಎಸ್‌ಎಸ್‌ ಭವನ) ಎನ್‌ಎಸ್‌ಎಸ್‌ನ ಉದ್ದೇಶಗಳಿಗೆ ಹೊಂದುವುದಿಲ್ಲ. ನುಡಿದಂತೆ ನಡೆಯುವುದು ಮತ್ತು ನಡೆದಂತೆ ನುಡಿಯುವುದು ಗಾಂಧೀಜಿಯ ಮೂಲ ನಡವಳಿಕೆ ಆಗಿತ್ತು. ಆದರೆ, ಆ ಕೆಲಸವನ್ನು ನಾವ್ಯಾರೂ ಮಾಡುತ್ತಿಲ್ಲ. ಅವರಿಗೆ ಸಲ್ಲದ ಹೊಗಳಿಕೆಯ ಮಾತುಗಳನ್ನು ಹೇಳುತ್ತಿದ್ದೇವೆ’ ಎಂದು ವಿಷಾದಿಸಿದರು.

ವಿಜ್ಞಾನ ಹೇಳುವುದನ್ನು ಪಾಲಿಸಬೇಕು:‘ಈಗ ಎದುರಾಗಿರುವ ಸಂಕಟದಿಂದ ಸಮಾಜವನ್ನು ಪಾರು ಮಾಡುವುದು ಯುವಕ-ಯುವತಿಯರಿಂದ ಮಾತ್ರ ಸಾಧ್ಯ. ಇದಕ್ಕಾಗಿ ವಿಜ್ಞಾನ ಹೇಳುತ್ತಿರುವುದನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

‘ವಿಶ್ವವಿದ್ಯಾಲಯಗಳು ಹಳ್ಳಿಗರನ್ನು ನಗರದ ಕಡೆಗೆ ವಲಸೆ ಹೋಗುವಂತೆ ಮಾಡುವ ಬದಲಿಗೆ, ಹಳ್ಳಿಗಳಲ್ಲೇ‌ ಉಳಿಯುವಂತೆ ಮತ್ತು ಅಲ್ಲೇ‌ ಜೀವನ‌ ಕಂಡುಕೊಳ್ಳುವಂತೆ ಮಾಡಬೇಕು. ಅಂತಹ ಚಟುವಟಿಕೆಗಳಿಗೆ ನಾನೂ ಕೈಜೋಡಿಸುತ್ತೇನೆ’ ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ, ಸಂಯೋಜನಾಧಿಕಾರಿ ಡಾ.ಬಿ.ಚಂದ್ರಶೇಖರ್, ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಂ.ಟಿ.ಸುರೇಶ್ ಪಾಲ್ಗೊಂಡಿದ್ದರು.

ಪ್ರಶಸ್ತಿಯ ವಿವರ
ಅತ್ಯುತ್ತಮ ಘಟಕಗಳು

1. ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜು, ಹುಣಸೂರಿನ ಡಿ.ಡಿ. ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು.
2. ಮಂಡ್ಯ ಜಿಲ್ಲೆ ಮದ್ದೂರು ಮಹಿಳಾ ಸರ್ಕಾರಿ ಕಾಲೇಜು.

ಅತ್ಯುತ್ತಮ ಕಾರ್ಯಕ್ರಮಾಧಿಕಾರಿಗಳು
1. ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಡಾ.ರಾಘವೇಂದ್ರ ಆರ್., ಹುಣಸೂರಿನ ಡಿ.ಡಿ. ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಕಿರಣ್‌ಕುಮಾರ್ ಸಿ.ಆರ್.
2. ಮಂಡ್ಯ ಜಿಲ್ಲೆ ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಡಾ.ನಮ್ರತಾ ಜಿ.ಆರ್.

ಅತ್ಯುತ್ತಮ ಸ್ವಯಂಸೇವಕರು: ಮಲ್ಲಪ್ಪ ಶ್ರೀಶೈಲ ಪಟ್ಟಣಶೆಟ್ಟಿ (ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು), ಭಾನುಪ್ರಕಾಶ್ (ಹುಣಸೂರು ರತ್ನಪುರಿಯ ವಿಎಸ್ಎಸ್‌ ಪ್ರ.ದ. ಕಾಲೇಜು).

ಅತ್ಯುತ್ತಮ ಸ್ವಯಂಸೇವಕಿಯರು: ಲಲಿತಾ ಎನ್‌.ಕೆ. (ಮಹಾರಾಣಿ ವಿಜ್ಞಾನ ಮಹಿಳಾ ಕಾಲೇಜು), ನಿಖಿತಾ ಬಿ.ಎನ್. (ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು).

ಉ.ಕಾ. ಸುಬ್ಬರಾಯಾಚಾರ್ ಸ್ಮರಣಾರ್ಥ ಪ್ರಶಸ್ತಿ
* ಅತ್ಯುತ್ತಮ ಸ್ವಯಂಸೇವಕ:
ಜೀವನ್ ಎಸ್. (ಹುಣಸೂರಿನ ಡಿ.ಡಿ. ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜು), ಮಧುಸೂದನ್ ಎಸ್. (ಗಂಗೋತ್ರಿ ಬಡಾವಣೆಯ ಜ್ಞಾನದೀಪ ಪ್ರಥಮ ದರ್ಜೆ ಕಾಲೇಜು).
* ಅತ್ಯುತ್ತಮ ಸ್ವಯಂಸೇವಕಿಯರು: ಭಾವನಾ ಪಿ. (ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜು),ಅನುಷಾ ಸಿ. (ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್‌ ಮಹಿಳಾ ಮತ್ತು ವಾಣಿಜ್ಯ ಕಾಲೇಜು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.