ADVERTISEMENT

ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ಸಂತ್ರಸ್ತ ಆಸ್ಪತ್ರೆಯಿಂದ ಮನೆಗೆ

ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 6:18 IST
Last Updated 15 ಜನವರಿ 2023, 6:18 IST
ಪುರುಷೋತ್ತಮ ಪೂಜಾರಿ
ಪುರುಷೋತ್ತಮ ಪೂಜಾರಿ   

ಮಂಗಳೂರು: ನಗರದ ಗರೋಡಿ ಬಳಿ ಸಂಭವಿಸಿದ್ದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಉಜ್ಜೋಡಿ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ನಗರದ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆ ಯಿಂದ ಶನಿವಾರ ಬಿಡುಗಡೆಗೊಂಡರು.

2022ರ ನ.19ರಂದು ಸ್ಫೋಟ ನಡೆದ ದಿನವೇ ಅವರನ್ನು ನಗರದ ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಫೋಟದಿಂದ ಅವರ ದೇಹದ ಶೇ 30ಕ್ಕೂ ಹೆಚ್ಚು ಭಾಗ ಸುಟ್ಟಿತ್ತು. ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಈಚೆಗಷ್ಟೇ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ಉಜ್ಜೋಡಿಯಲ್ಲಿ ಇರುವ ಪುರುಷೋತ್ತಮ ಪೂಜಾರಿ ಅವರ ಮನೆ ಶಿಥಿಲಗೊಂಡಿದ್ದು, ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಖಜಾಂಚಿ ಪದ್ಮರಾಜ್‌ ಆರ್‌. ನೇತೃತ್ವದ ‘ಗುರು ಬೆಳದಿಂಗಳು ಟ್ರಸ್ಟ್‌’ ವತಿಯಿಂದ ಅದನ್ನು ನವೀಕರಿಸಲಾಗುತ್ತಿದೆ. ಹಾಗಾಗಿ ಅವರ ಕುಟುಂಬವು ಉಜ್ಜೋಡಿ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದೆ.

ADVERTISEMENT

ಪುರುಷೋತ್ತಮ ಪೂಜಾರಿ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ಭರವಸೆ ನೀಡಿದೆ. ‘ಬಿಲ್ ಅನ್ನು ಸರ್ಕಾರವು ಪಾವತಿ ಮಾಡುವ ಬಗ್ಗೆ ಸರಿಯದ ಮಾಹಿತಿ ತಲುಪದ ಕಾರಣ ಪುರುಷೋತ್ತಮ ಪೂಜಾರಿ ಅವರ ಮಗಳು ಚಿತ್ರಾಕ್ಷಿ ಅವರ ಇಎಸ್‌ಐ ಸೌಲಭ್ಯದಿಂದ ಮೊದಲ ಬಿಲ್‌ ಪಾವತಿಸಲಾಗಿತ್ತು. ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಾಗ ಯಾವುದೇ ಬಿಲ್‌ ಅನ್ನು ಕುಟುಂಬದಿಂದ ಪಾವತಿಸಿಲ್ಲ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪುರುಷೋತ್ತಮ ಪೂಜಾರಿ ಆಟೊ ರಿಕ್ಷಾದಲ್ಲಿ ಬಾಂಬ್‌ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್‌ ಪ್ರಯಾಣಿಸುವಾಗ ಗರೋಡಿ ಬಳಿ ಕುಕ್ಕರ್‌ ಬಾಂಬ್‌ ಸ್ಫೋಟಗೊಂಡಿತ್ತು. ಬಳಿಕ ಗಾಯಗೊಂಡ ಇಬ್ಬರನ್ನು ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಾರಿಕ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2022ರ ಡಿ. 17ರಂದು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ.

‘ರಿಕ್ಷಾನೂ ಇಲ್ಲ– ಜೀವನೋಪಾಯವೂ ಇಲ್ಲ’

ಪುರುಷೋತ್ತಮ ಪೂಜಾರಿ ಅವರು ಆಟೊರಿಕ್ಷಾ ಓಡಿಸಿ ಕುಟುಂಬವನ್ನು ಪೊರೆಯುತ್ತಿದ್ದರು. ಅವರ ಆಟೊ ರಿಕ್ಷಾ ಈಗಲೂ ಪೊಲೀಸರ ವಶದಲ್ಲೇ ಇದೆ. ಅವರು ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರೂ ಜೀವನೋಪಾಯಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.

‘ಸುಧಾರಿಸಲು ವರ್ಷ ಬೇಕು’

‘ಪುರುಷೋತ್ತಮ ಅವರನ್ನು ಉಜ್ಜೋಡಿಯ ಬಾಡಿಗೆ ಮನೆಗೆ ಕರೆತಂದಿದ್ದೇವೆ. ಅವರ ಆರೋಗ್ಯ ತಕ್ಕಮಟ್ಟಿಗೆ ಸುಧಾರಿಸಿದೆ. ಸ್ಫೋಟದಿಂದ ಅವರ ಎರಡು ಕೈಗಳಿಗೆ ಬಲವಾದ ಗಾಯಗಳಾಗಿವೆ. ಹಾಗಾಗಿ ಸದ್ಯಕ್ಕೆ ಅವರು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಅವರು ಪೂರ್ತಿ ಚೇತರಿಸಿಕೊಳ್ಳಲಿ ಕನಿಷ್ಠ ಒಂದು ವರ್ಷವಾದರೂ ಬೇಕು. ಅಲ್ಲಿಯವರೆಗೆ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಾದೀತು’ ಎಂದು ಅವರ ಪತ್ನಿಯ ಸೋದರ ಪ್ರದೀಪ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.