ಬೆಂಗಳೂರು: ‘ತಯಾರಿಸಲಾದ ಅಡುಗೆ ಎಣ್ಣೆಯನ್ನು ಪ್ರತಿ ಆರು ತಿಂಗಳಿಗೊಮ್ಮೆ ವಿಶ್ಲೇಷಣೆಗೆ ಒಳಪಡಿಸಬೇಕು’ ಎಂದು ಆಹಾರ ಸುರಕ್ಷತೆ ಇಲಾಖೆ ಆಯುಕ್ತ ಕೆ. ಶ್ರೀನಿವಾಸ ಅವರು ಅಡುಗೆ ಎಣ್ಣೆ ಉದ್ದಿಮೆದಾರರಿಗೆ ಸೂಚಿಸಿದ್ದಾರೆ.
ಅಡುಗೆ ಎಣ್ಣೆಗೆ ಸಂಬಂಧಿಸಿದಂತೆ ವರ್ಚುವಲ್ ವೇದಿಕೆ ಮೂಲಕ ಅವರು ಸಭೆ ನಡೆಸಿದರು. ಜಿಲ್ಲಾ ಅಂಕಿತಾಧಿಕಾರಿಗಳು, ಅಡುಗೆ ಎಣ್ಣೆ ತಯಾರಿಕಾ ಘಟಕದ ಮಾಲೀಕರು, ಹೋಟೆಲ್ ಉದ್ದಿಮೆದಾರರ ಸಂಘದ ಪದಾಧಿಕಾರಿಗಳು, ಬೇಕರಿ ಉತ್ಪನ್ನಗಳ ತಯಾರಿಕಾ ಸಂಘದ ಪದಾಧಿಕಾರಿಗಳು, ಉಪಯೋಗಿಸಿದ ಅಡುಗೆ ಎಣ್ಣೆ ವಿಲೇವಾರಿ ಏಜೆನ್ಸಿ (ಆರ್‌ಯುಸಿಒ) ಮಾಲೀಕರು ಮತ್ತು ವ್ಯವಸ್ಥಾಪಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಅನಿಲ ಅಭಿವೃದ್ಧಿ ಮಂಡಳಿ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಕಡಿಮೆ ಕೊಬ್ಬಿನಾಂಶ ಇರುವ ಅಡುಗೆ ಎಣ್ಣೆಯನ್ನು ಉಪಯೋಗಿಸಬೇಕು. ಬಳಸಿದ ಅಡುಗೆ ಎಣ್ಣೆಯನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಅಡುಗೆ ಎಣ್ಣೆ ತಯಾರಿಕಾ ಘಟಕದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಣ್ಣೆಗೆ ಸಂಬಂಧಿಸಿದಂತೆ ಅಗತ್ಯ ವಿವರಗಳನ್ನೊಳಗೊಂಡ ಚೀಟಿಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು’ ಎಂದು ಸೂಚಿಸಿದರು.
‘ರಾಜ್ಯದಲ್ಲಿ 2024–25 ಮತ್ತು 2025–26ನೇ ಸಾಲಿನಲ್ಲಿ ಒಟ್ಟು 32.68 ಲಕ್ಷ ಲೀ. ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ’ ಎಂದು ಆರ್‌ಯುಸಿಒ ಏಜೆನ್ಸಿ ಪ್ರತಿನಿಧಿಗಳು ಈ ವೇಳೆ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ, ಜೈವಿಕ ಅನಿಲ ತಯಾರಿಕಾ ಘಟಕಗಳಿಗೆ ನೀಡಬೇಕು. ಹೋಟೆಲ್‌ಗಳಲ್ಲಿ ಬಳಸಲಾದ ಎಣ್ಣೆಯನ್ನು ಕಡ್ಡಾಯವಾಗಿ ಆರ್‌ಯುಸಿಒ ಏಜೆನ್ಸಿಗೆ ನೀಡಿ, ಮರುಬಳಕೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.