ADVERTISEMENT

ಕೊಡಗು: ರಸ್ತೆಗೆ ಬಂದ ಕಾಡಾನೆ, ಅಪಾಯದಿಂದ ಪಾರಾದ ಕಾರ್ಮಿಕ ಮಹಿಳೆ

ಮುಖ್ಯ ರಸ್ತೆಯಲ್ಲೇ ಒಂಟಿ ಸಲಗ ಸಂಚಾರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 12:13 IST
Last Updated 11 ಜೂನ್ 2020, 12:13 IST
ರಸ್ತೆಯಲ್ಲಿ ನಿಂತ ಆನೆ
ರಸ್ತೆಯಲ್ಲಿ ನಿಂತ ಆನೆ   

ಸಿದ್ದಾಪುರ: ಇಲ್ಲಿನಮಾಲ್ದಾರೆ ಗ್ರಾಮದಲ್ಲಿ ಮುಖ್ಯ ರಸ್ತೆಯ ಮೂಲಕ ಕಾಡಾನೆಯೊಂದು ರಾಜಾರೋಷವಾಗಿ ಸಂಚರಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಲ್ದಾರೆಯ ಕಳ್ಳಲ ಎಂಬಲ್ಲಿ ಗುರುವಾರ ಬೆಳಿಗ್ಗೆ ಅಲ್ಲಿನ ಕಾರ್ಮಿಕ ಮಹಿಳೆ ಉಷಾ ಎಂಬುವರು ಎಂದಿನಂತೆ ತೋಟಕ್ಕೆ ತೆರಳುತ್ತಿದ್ದರು. ಈ ಸಂದರ್ಭ ರಸ್ತೆಯಲ್ಲೇ ರಾಜಾರೋಷವಾಗಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ‌‌ಕಾಡಾನೆ ಸಂಚರಿಸುತ್ತಿರುವ ದೃಶ್ಯ ಚಿತ್ರೀಕರಿಸಿರುವ ಸ್ಥಳೀಯರು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಒಂಟಿ ಸಲಗವು ಮುಖ್ಯರಸ್ತೆಯಲ್ಲೇ ದಾಟುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಮಾಲ್ದಾರೆ ಪಟ್ಟಣದ ಗಣಪತಿ ದೇವಾಲಯದ ಬಳಿಯಲ್ಲೂ ಕೂಡ ಪ್ರತಿದಿನ ಕಾಡಾನೆ ಹಿಂಡು ಕಾಫಿ ತೋಟದಿಂದ ಅರಣ್ಯಕ್ಕೆ ದಾಟುತ್ತಿದ್ದು, ಮುಖ್ಯ ರಸ್ತೆಯಲ್ಲಿ ಸಂಚರಿಸುವವರಿಗೆ ಸಮಸ್ಯೆ ಎದುರಾಗಿದೆ. ಪ್ರತಿದಿನ ಬೆಳಗ್ಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಕಾಫಿ ತೋಟದಿಂದ ಅರಣ್ಯಕ್ಕೆ ಹಾಗೂ ಅರಣ್ಯದಿಂದ ಕಾಫಿ ತೋಟಕ್ಕೆ ಸಂಚರಿಸುತ್ತಿದೆ.

ADVERTISEMENT

ಪ್ರತಿಭಟನೆಯ ಎಚ್ಚರಿಕೆ: ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ ಆಂಟೋನಿ, ಕಾಡಾನೆಗಳ ಹಿಂಡು ಕಾಫಿ ತೋಟದಲ್ಲಿ ಬೀಡುಬಿಡುತ್ತಿದ್ದು, ಬೆಳೆಗಳನ್ನು ನಾಶಪಡಿಸುತ್ತಿದೆ. ಮತ್ತೊಂದೆಡೆ ಕಾರ್ಮಿಕರು ಕೂಡ ಭಯದಲ್ಲೇ ಕೆಲಸಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು, ಅರಣ್ಯ ಇಲಾಖೆ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ವಿವಿಧ ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.