ADVERTISEMENT

ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ: ಜ್ಞಾನೇಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2021, 12:22 IST
Last Updated 3 ಡಿಸೆಂಬರ್ 2021, 12:22 IST
ಗೃಹ ಸಚಿವ ಆರಗ ಜ್ಞಾನೇಂದ್ರ (ಪ್ರಜಾವಾಣಿ ಸಂಗ್ರಹ ಚಿತ್ರ)
ಗೃಹ ಸಚಿವ ಆರಗ ಜ್ಞಾನೇಂದ್ರ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಂಗಳೂರು: ‘ಪೊಲೀಸರು ಭ್ರಷ್ಟರಾಗಿದ್ದಾರೆ. ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಆರಕ್ಷಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸಭೆಯಲ್ಲಿ ಗೃಹ ಸಚಿವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಜತೆ ದೂರವಾಣಿ ಮೂಲಕ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಅಕ್ರಮ ಜಾನುವಾರು, ಗೋ ಸಾಗಾಟ ವಿಚಾರದಲ್ಲಿ ಸಿಟ್ಟಾದ ಸಚಿವರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡಿದ್ದಾರೆ.

‘ಇಡೀ ಚಿಕ್ಕಮಗಳೂರು ಜಿಲ್ಲೆ ನಿಮ್ಮದು. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದ್ದೇವೆ. ಯಾರಿಗೂ ಕಡಿಮೆ ಮಾಡಿಲ್ಲ. ಆದ್ರೆ ಇವರಿಗೆಲ್ಲ ಸಂಬಳದಲ್ಲಿ ಬದುಕಬೇಕೆಂದಿಲ್ಲ. ಇಂಥವರೆಲ್ಲ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಸಮವಸ್ತ್ರ ಬಿಚ್ಚಿಟ್ಟು ಎಲ್ಲಾದರೂ ಹೋಗಿ ಸಾಯಲಿ ಅಥವಾ ಮಣ್ಣು ಹೊರಲಿ. ಇವರನ್ನೆಲ್ಲ ನಂಬಿಕೊಂಡು ಜನ ಬದುಕುವುದು ಹೇಗೆ? ಇಲ್ಲಿ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗುತ್ತಾರೆ. ಎಲ್ಲ ಪೊಲೀಸರು ಹಾಳಾಗಿ ಹೋಗಿದ್ದಾರೆ’ ಎಂದು ಸಚಿವರು ಹೇಳುತ್ತಿರುವುದು ವಿಡಿಯೊದಲ್ಲಿದೆ.

ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು, ‍‘ಎಲ್ಲ ಪೊಲೀಸರನ್ನು ಉದ್ದೇಶಸಿ ಆ ಹೇಳಿಕೆ ನೀಡಿಲ್ಲ. ಅಕ್ರಮ ಗೋ ಸಾಗಾಟ ಮಾಡುವವರೊಂದಿಗೆ ಶಾಮೀಲಾದವರನ್ನು ಮಾತ್ರ ಉಲ್ಲೇಖಿಸಿ ಹಾಗೆ ಮಾತನಾಡಿದ್ದೆ’ ಎಂದು ಹೇಳಿದ್ದಾರೆ.

‘ಗೃಹಸಚಿವನಾಗಿ ನಾನು ಪೊಲೀಸರನ್ನು ಗೌರವಿಸುತ್ತೇನೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಮೊನ್ನೆಯಷ್ಟೇ ನನ್ನ ಕ್ಷೇತ್ರದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದವರ ಮೇಲೆ ಹಲ್ಲೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಕೆಲ ಪೊಲೀಸರನ್ನು ಉಲ್ಲೇಖಿಸಿದ್ದೆ’ ಎಂದು ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.