ADVERTISEMENT

ಅಂಗಾಂಗ ಕಸಿಗೂ ಕೊರೊನಾ ಅಡ್ಡಿ, ಸೋಂಕು ಭೀತಿಯಿಂದ ದಾನಕ್ಕೆ ಮುಂದೆ ಬರದ ದಾನಿಗಳು

ವರುಣ ಹೆಗಡೆ
Published 7 ಏಪ್ರಿಲ್ 2020, 21:00 IST
Last Updated 7 ಏಪ್ರಿಲ್ 2020, 21:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಂಗಾಂಗ ವೈಫಲ್ಯಕ್ಕೊಳಗಾದವರು ನೋವಿನಲ್ಲಿಯೇ ದಿನಗಳನ್ನು ಲೆಕ್ಕ ಹಾಕುತ್ತಿದ್ದು, ಕಸಿ ಮಾಡಿಸಿಕೊಳ್ಳಬೇಕೆಂಬ ಕನಸನ್ನು ಕೋವಿಡ್‌–19 ಸದ್ಯಕ್ಕೆ ಕಸಿದುಕೊಂಡಿದೆ. ಇನ್ನೊಂದೆಡೆ ಸೋಂಕು ಭೀತಿ ಹಿನ್ನೆಲೆಯಲ್ಲಿ ಜನರೂ ಅಂಗಾಂಗ ದಾನಕ್ಕೆಹಿಂದೇಟು ಹಾಕಲಾರಂಭಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿಸರ್ಕಾರ ತುರ್ತಾಗಿ ಅಗತ್ಯವಲ್ಲದ ಚಿಕಿತ್ಸೆಗಳನ್ನು ಮುಂದೂಡುವಂತೆ ರೋಗಿಗಳಿಗೆ ಮನವಿ ಮಾಡಿದೆ. ಇದಕ್ಕೆ ಪೂರಕವಾಗಿ ಕೆಲ ಆಸ್ಪ‍ತ್ರೆಗಳೂ ಹೊರರೋಗಿ ವಿಭಾಗಗಳನ್ನು ಸ್ಥಗಿತಗೊಳಿಸಿ, ತುರ್ತುಚಿಕಿತ್ಸೆಗಳನ್ನು ಮಾತ್ರ ನೀಡುತ್ತಿವೆ. ಜೀವಂತವಾಗಿ ಇರುವವರು ಅಂಗಾಂಗಗಳನ್ನು ದಾನ ಮಾಡುವುದನ್ನು ಮುಂದೂಡಬೇಕು ಎಂದುವಿಶ್ವ ಆರೋಗ್ಯ ಸಂಸ್ಥೆಯೂ ಸೂಚಿಸಿದೆ.ಹಾಗಾಗಿಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗುತ್ತಿದೆ. ಹೃದಯ, ಮೂತ್ರಪಿಂಡ, ಯಕೃತ್, ಪುಪ್ಪುಸ, ಮೆದೋಜಿರಕಗ್ರಂಥಿ, ಸಣ್ಣ ಕರುಳು, ನರ, ಚರ್ಮ, ರಕ್ತ ನಾಳ ಸೇರಿದಂತೆ ವಿವಿಧ ಅಂಗಾಂಗಳಿಗೆ ರಾಜ್ಯದಲ್ಲಿ ಮೂರೂವರೆ ಸಾವಿರಕ್ಕೂ ಅಧಿಕ ಮಂದಿ ಎದುರುನೋಡುತ್ತಿದ್ದಾರೆ.

ಮಿದುಳು ನಿಷ್ಕ್ರಿಯಗೊಂಡು ತನ್ನ ಜೀವವೇ ಕೊನೆಯಾಗುವ ಹಂತದಲ್ಲಿ ವ್ಯಕ್ತಿ ಅಂಗಾಂಗ ದಾನ ಪ್ರಕ್ರಿಯೆಗೆ ಒಳಗಾದಲ್ಲಿ ಕನಿಷ್ಠ ಐದು ಜೀವಗಳನ್ನು ಉಳಿಸಬಹುದಾಗಿದೆ. ಜಾಗೃತಿ ಕೊರತೆಯಿಂದಾಗಿ ಬಹುತೇಕರು ಅಂಗಾಂಗ ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಫೋರ್ಟಿಸ್, ನಾರಾಯಣ ಹೆಲ್ತ್, ಎಂ.ಎಸ್. ರಾಮಯ್ಯ, ಮಣಿಪಾಲ್, ಸಕ್ರಾ ವರ್ಡ್ ಸೇರಿದಂತೆ ಪ್ರಮುಖ ಖಾಸಗಿ ಆಸ್ಪತ್ರೆಯ ಜತೆಗೆ ನೆಪ್ರೊ ಯುರಾಲಜಿ, ಜಯದೇವ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳ
ಲ್ಲಿಯೂ ಅಂಗಾಂಗ ಕಸಿ ನಡೆಯುತ್ತಿಲ್ಲ.

ADVERTISEMENT

ನೋಂದಣಿಗೂ ಹಿಂದೇಟು:ಬೌರಿಂಗ್ ಮತ್ತು ಲೇಡಿ ಕರ್ಜನ್ ಸಂಶೋಧನಾ ಸಂಸ್ಥೆಯನ್ನು ಕೋವಿಡ್‌–19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಅಲ್ಲಿನ ‘ಕಸಿ ರಹಿತ ಅಂಗ ಮರುಪಡೆಯುವಿಕೆ ಕೇಂದ್ರ'ಕ್ಕೆ ದಾನಿಗಳ ಕೊರತೆಯಿಂದ ಅಂಗಾಂಗಗಳು ಬರುತ್ತಿಲ್ಲ. ರಾಜ್ಯ ಸರ್ಕಾರದ ಜೀವ ಸಾರ್ಥಕತೆ ಯೋಜನೆಯಡಿ ಮಾರ್ಚ್ ತಿಂಗಳಲ್ಲಿ ಯಾವುದೇ ವ್ಯಕ್ತಿ ಅಂಗಾಂಗ ದಾನ ಸಂಬಂಧ ಹೆಸರು ನೋಂದಾಯಿಸಿಲ್ಲ.

‘ದಾನಿಗಳು ಬಂದಲ್ಲಿ ನಾವು ಹೆಸರು ನೋಂದಾಯಿಸಿಕೊಳ್ಳುತ್ತೇವೆ. ಲಾಕ್‌ ಡೌನ್‌ನಿಂದಾಗಿ ನೋಂದಣಿ ಕಡಿಮೆಯಾಗಿದೆ. ಆನ್‌ಲೈನ್‌ನಲ್ಲಿಯೂ ನೋಂದಣಿಯಾಗುವ ಅವಕಾಶ ನೀಡಲಾಗಿದೆ. ಸಾರಿಗೆ ಸಮಸ್ಯೆಯಿಂದ ರೋಗಿಗಳಿಗೆ ಆಸ್ಪತ್ರೆಗಳಿಗೂ ಹೋಗಲು ಸಾಧ್ಯವಾಗುತ್ತಿಲ್ಲ’ ಎಂದು ಜೀವ ಸಾರ್ಥಕತೆ ಸೊಸೈಟಿಯ ಸಂಯೋಜಕಿ ಕೆ.ಯು. ಮಂಜುಳಾ ತಿಳಿಸಿದರು.

ಮೂತ್ರಪಿಂಡ ಸಮಸ್ಯೆ ಇರುವವರಿಗೆ ಸದ್ಯ ಡಯಾಲಿಸಿಸ್ ಮಾಡುತ್ತಿದ್ದು, ಕಸಿಯನ್ನು ಮುಂದಕ್ಕೆ ಹಾಕಲಾಗಿದೆ. ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಬಹುದಾಗಿದೆ

- ಡಾ. ಕೇಶವಮೂರ್ತಿ, ನೆಫ್ರೊ ಯುರಾಲಜಿ ಸಂಸ್ಥೆಯ ನಿರ್ದೇಶಕ

ಚರ್ಮ ಸಂಗ್ರಹಕ್ಕೂ ಹಿನ್ನಡೆ

ಲಾಕ್‌ ಡೌನ್‌ನಿಂದ ಚರ್ಮ ಸಂಗ್ರಹವೂ ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್‌ ಬ್ಯಾಂಕಿನ ಸಿಬ್ಬಂದಿಗೆ ಸವಾಲಾಗಿದೆ. ಹದಿನೈದು ದಿನಗಳಲ್ಲಿ ಒಬ್ಬರಿಂದ ಮಾತ್ರ ಚರ್ಮ ಸಂಗ್ರಹಿಸಲಾಗಿದ್ದು, ಒಬ್ಬರು ದಾನ ಮಾಡಲು ಹೆಸರು ನೋಂದಾಯಿಸಿದ್ದಾರೆ.

‘ಜನರು ಭಯದಿಂದ ಚರ್ಮ ಹಾಗೂ ಅಂಗಾಂಗಗಳನ್ನು ದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕಳೆದ ಕೆಲ ದಿನದಿಂದ ಚರ್ಮ ಸಂಗ್ರಹಕ್ಕೆ ಯಾವುದೇ ದೂರವಾಣಿ ಕರೆಗಳು ಬಂದಿಲ್ಲ. ದಾನಿಗಳಿಂದ ಚರ್ಮವನ್ನು ತೆಗೆದುಕೊಳ್ಳುವಾಗ ಅವರ 14 ದಿನದ ಪ್ರಯಾಣದ ಇತಿಹಾಸ ಹಾಗೂ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದರೇ ಎಂಬ ಮಾಹಿತಿ ಪಡೆದು, ಸಂಗ್ರಹಿಸುತ್ತೇವೆ. ಲಾಕ್‌ ಡೌನ್‌ ಮುಗಿದ ಬಳಿಕ ದಾನಿಗಳು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ಸ್ಕಿನ್‌ ಬ್ಯಾಂಕ್‌ ಮುಖ್ಯಸ್ಥ ಡಾ. ರಮೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.