ADVERTISEMENT

ಕೊರೊನಾ ಭೀತಿ| ತಪಾಸಣೆಗೆ ನಕಾರ: ಹಂಪಿ ನೋಡದೆ ಹಿಂತಿರುಗಿದ ವಿದೇಶಿಗರು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 15:39 IST
Last Updated 12 ಮಾರ್ಚ್ 2020, 15:39 IST
   

ಹೊಸಪೇಟೆ: ಹಂಪಿ ವೀಕ್ಷಣೆಗೆ ಗುರುವಾರ ಖಾಸಗಿ ಬಸ್ಸಿನಲ್ಲಿ ಬಂದಿದ್ದ ಸುಮಾರು 50 ಜನ ವಿದೇಶಿ ಪ್ರವಾಸಿಗರನ್ನು ತಾಲ್ಲೂಕು ಆಡಳಿತವು ನಗರದಿಂದ ವಾಪಸ್‌ ಕಳುಹಿಸಿಕೊಟ್ಟಿದೆ.

ಹಂಪಿ ಸ್ಮಾರಕಗಳ ವೀಕ್ಷಣೆಗೆ ವಿದೇಶಿ ಪ್ರವಾಸಿಗರು ಬೆಳಿಗ್ಗೆ ನಗರದ ಮೂಲಕ ಹಂಪಿಗೆ ಪಯಣ ಬೆಳೆಸುತ್ತಿದ್ದರು. ಈ ವಿಷಯ ತಿಳಿದು, ತಾಲ್ಲೂಕು ಆಡಳಿತ ಹಾಗೂ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಅವರನ್ನು ತಡೆದು, ಬಳಿಕ ಆಸ್ಪತ್ರೆಗೆ ಕರೆದೊಯ್ದರು.

‘ಎಲ್ಲೆಡೆ ಕೋವಿಡ್‌ ಜ್ವರ ವ್ಯಾಪಕವಾಗಿ ಹರಡುತ್ತಿರುವುದರಿಂದ ಎಲ್ಲರ ತಪಾಸಣೆ ಮಾಡುವುದು ಕಡ್ಡಾಯ. ಅಷ್ಟೇ ಅಲ್ಲ, 14 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಮೇಲ್ವಿಚಾರಣೆಯಲ್ಲಿ ಇಡಲಾಗುವುದು’ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಯೋಚಿಸಲು ಸಮಯ ಕೊಡಬೇಕೆಂದು ಪ್ರವಾಸಿಗರು ಕೇಳಿದ್ದಾರೆ. ಬಳಿಕ ಅವರನ್ನು ಅಮರಾವತಿ ಸರ್ಕಾರಿ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಷ್ಟು ದಿನಗಳ ವರೆಗೆ ಕಳೆಯಲು ಒಪ್ಪದ ಪ್ರವಾಸಿಗರು ಬಂದ ಬಸ್ಸಿನಲ್ಲೇ ಗೋವಾಕ್ಕೆ ಹಿಂತಿರುಗಿದ್ದಾರೆ.

ಕೆಲವರು ನಗರ ಹೊರವಲಯದಲ್ಲಿ ಬಸ್ಸಿನಿಂದ ಇಳಿದು, ಆಟೊ ಮೂಲಕ ಹಂಪಿಗೆ ಪಯಣ ಬೆಳೆಸಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿ ನೀಡಲು ನಿರಾಕರಿಸಿದರು.

ಬಳಿಕ ಉಪವಿಭಾಗಾಧಿಕಾರಿ ಶೇಖ್‌ ತನ್ವೀರ್‌ ಆಸಿಫ್‌ ಅವರನ್ನು ಸಂಪರ್ಕಿಸಿದಾಗ, ‘ವಿದೇಶಿ ಪ್ರವಾಸಿಗರು ಬಂದದ್ದು ನಿಜ. ಎಲ್ಲರ ತಪಾಸಣೆ ನಡೆಸಿ, ಕೆಲವು ದಿನಗಳವರೆಗೆ ಮೇಲ್ವಿಚಾರಣೆಯಲ್ಲಿ ಇರಬೇಕಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ, ಅದನ್ನವರು ನಿರಾಕರಿಸಿ, ಬಂದ ಊರಿಗೆ ವಾಪಸ್‌ ಹೋಗುವುದಾಗಿ ತಿಳಿಸಿದರು. ಹಾಗಾಗಿ ಅವರನ್ನು ಕಳುಹಿಸಿಕೊಡಲಾಯಿತು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.