ADVERTISEMENT

ಕೊರೊನಾ ಸೋಂಕು ಭೀತಿ: ಇಂದಿನಿಂದಲೇ ಬೆಂಗಳೂರಿನ ಶಾಲೆಗಳಿಗೆ ರಜೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 1:46 IST
Last Updated 13 ಮಾರ್ಚ್ 2020, 1:46 IST
ಕೋವಿಡ್‌-19  ಹಿನ್ನಲೆಯಲ್ಲಿ ಮುಂಜಾಗ್ರತವಾಗಿ ಕ್ರಮವಾಗಿ ಮಾಸ್ಕ್‌ ಧರಿಸಿರುವ ಹಾಸನದ ನೇತಾಜಿ ಪಬ್ಲಿಕ್ ಶಾಲೆ ಮಕ್ಕಳು
ಕೋವಿಡ್‌-19 ಹಿನ್ನಲೆಯಲ್ಲಿ ಮುಂಜಾಗ್ರತವಾಗಿ ಕ್ರಮವಾಗಿ ಮಾಸ್ಕ್‌ ಧರಿಸಿರುವ ಹಾಸನದ ನೇತಾಜಿ ಪಬ್ಲಿಕ್ ಶಾಲೆ ಮಕ್ಕಳು   

ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಶುಕ್ರವಾರದಿಂದಲೇ ಎಲ್ಲಾ ಶಾಲೆಗಳಿಗೆ ಬೇಸಿಗೆ ರಜೆ ನೀಡಬೇಕು, 1ರಿಂದ 6ನೇ ತರಗತಿವರೆಗೆ ಪರೀಕ್ಷೆ ನಡೆಸಬಾರದು ಎಂದು ಸರ್ಕಾರ ಸೂಚನೆ ನೀಡಿದೆ.

‘7ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿದ್ದರೂ, ಶುಕ್ರವಾರದಿಂದಲೇ ಈ ತರಗತಿಗಳ ವಿದ್ಯಾರ್ಥಿಗಳಿಗೆ ಅಭ್ಯಾಸ ರಜೆ ನೀಡಬೇಕು. ಅಂದರೆ ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಇರಬಾರದು, ಪರೀಕ್ಷಾ ದಿನಗಳಂದು ಮಾತ್ರ ವಿದ್ಯಾರ್ಥಿಗಳು ಶಾಲೆಗೆ ಬರಬೇಕು’ ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

‘ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ1ರಿಂದ 6ನೇ ತರಗತಿಯವರೆಗೆ ರಜೆ ಮುಗಿದ ಬಳಿಕವೂ ಪರೀಕ್ಷೆ ನಡೆಸುವುದಿಲ್ಲ. ಈಗಾಗಲೇ ನಡೆದಿರುವ ಎಫ್‌ಐ 1, 2, 3, 4 ಹಾಗೂ ಎಸ್‌ಎ 1 ಪರೀಕ್ಷೆಯ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಲಾಗುತ್ತದೆ. ಬೇಸಿಗೆ ರಜೆ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಿಗೂ ಅನ್ವಯವಾಗುತ್ತದೆ. ಆದರೆ ಪರೀಕ್ಷೆ ನಡೆಸುವುದು ಆಯಾ ಮಂಡಳಿಗಳಿಗೆ ಬಿಟ್ಟ ವಿಷಯ. 6ನೇ ತರಗತಿವರೆಗೂ ತಕ್ಷಣದಿಂದ ರಜೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದರು.

ADVERTISEMENT

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಐದಕ್ಕೆ

ಗ್ರೀಸ್‌ನಿಂದ ಬೆಂಗಳೂರಿಗೆ ಬಂದಿದ್ದ 26 ವರ್ಷದ ವ್ಯಕ್ತಿಗೆ ಕೋವಿಡ್‌ 19 ತಗುಲಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್‌–19 ಪೀಡಿತರ ಸಂಖ್ಯೆ ಐದಕ್ಕೆ ಏರಿದೆ.

ಗ್ರೀಸ್‌ನಿಂದ ಮಾ.6ಕ್ಕೆ ಮುಂಬೈಗೆ ಬಂದಿದ್ದ ವ್ಯಕ್ತಿ, ಮಾ.8ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಇಲ್ಲಿಗೆ ವಾಪಸ್‌ ಆಗಿದ್ದರು. ಸೋದರನ ಮನೆಯಲ್ಲಿ ನೆಲೆಸಿದ್ದ ಅವರು ಮಾ.9ಕ್ಕೆ ಕಚೇರಿಗೆ ತೆರಳಿ, ನಾಲ್ಕು ಮಂದಿ ಸ್ನೇಹಿತರನ್ನು ಭೇಟಿ ಮಾಡಿದ್ದರು. ಕಚೇರಿಗೆ ಹೋದ ಅವರು ಅನಾರೋಗ್ಯದ ಕಾರಣದಿಂದ ಒಂದು ಗಂಟೆ ಮಾತ್ರ ಕಾರ್ಯನಿರ್ವಹಿಸಿ ಮನೆಗೆ ತೆರಳಿದ್ದರು. ಬಳಿಕ ಅವರು, ಜಯನಗರ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬದವರು ಮುಂಬೈನಲ್ಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.