ADVERTISEMENT

ಧಾರವಾಡದ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ : ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 4:19 IST
Last Updated 22 ಮಾರ್ಚ್ 2020, 4:19 IST
   

ಹುಬ್ಬಳ್ಳಿ: ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ಓರ್ವ ವ್ಯಕ್ತಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು, ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ವಿದೇಶ ಪ್ರವಾಸದಿಂದ ಆಗಮಿಸಿದ್ದ ಈ ವ್ಯಕ್ತಿಯು ಮಾರ್ಚ್ 12 ರಂದು ಧಾರವಾಡ ನಗರಕ್ಕೆ ಬಂದಿದ್ದರು. ಶಂಕಿತ ಕೋವಿಡ್ 19 ರ ರೋಗಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ರಂದು ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ರೋಗ ಲಕ್ಷಣಗಳಿಗೆ ಅನುಗುಣವಾಗಿ ಅದೇ ದಿನ ಅವರ ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗದ ವಿಡಿಆರ್ ಎಲ್ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಇದೀಗ ಪ್ರಯೋಗಾಲಯ ವರದಿ ಕೋವಿಡ್ 19 ಪಾಸಿಟಿವ್ ಎಂದಿ ಬಂದಿದೆ.

ಹೊಸಯಲ್ಲಾಪುರ ಸುತ್ತಮುತ್ತ ಕಂಟೈನಮೆಂಟ್ ಪ್ರದೇಶ ಘೋಷಣೆ: ಸೋಂಕು ದೃಢಪಟ್ಟಿರುವ ವ್ಯಕ್ತಿಯು ಧಾರವಾಡ ನಗರದ ಹೊಸಯಲ್ಲಾಪುರ ಪ್ರದೇಶಕ್ಕೆ ಸೇರಿದ 33 ವರ್ಷ ವಯಸ್ಸಿನ ಪುರುಷನಾಗಿದ್ದಾರೆ.

ADVERTISEMENT

ಹೊಸಯಲ್ಲಾಪುರ ಪ್ರದೇಶವನ್ನು ಕಂಟೈನಮೆಂಟ್ ಎಂದು ಘೋಷಿಸಲಾಗಿದ್ದು, ಅಲ್ಲಿಂದ ಸುತ್ತಮುತ್ತಲಿನ 3 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆಗಮನ ಮತ್ತು ನಿರ್ಗಮನವನ್ನು ನಿರ್ಬಂಧಿಸಲಾಗಿದೆ.

ಈ ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ. ಈ ವ್ಯಕ್ತಿಯ ಸಂಪರ್ಕಕ್ಕೆ ಬಂದವರ ಮಾಹಿತಿ ( Contact Tracing) ಸಂಗ್ರಹಿಸಲಾಗುತ್ತಿದೆ.

ಸಾಮಾಜಿಕ ಅಂತರ, ಶುಚಿತ್ವ ಪಾಲನೆಗೆ ಒತ್ತು ನೀಡಿ: ಜಿಲ್ಲೆಯಾದ್ಯಂತ ಈಗಾಗಲೇ ಕೊರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ಜನತೆ ಭಯಕ್ಕೆ ಒಳಗಾಗಬಾರದು, ಸಾಮಾಜಿಕ ಅಂತರ ಹಾಗೂ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು. ಸಾರ್ವಜನಿಕರು ಸಾಧ್ಯವಾದಷ್ಟು ತಮ್ಮ ಮನೆಗಳಲ್ಲಿಯೇ ಇರುವುದರ ಮೂಲಕ ವೈರಾಣು ತಡೆಯಲು ತಮ್ಮ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.