ಬೆಂಗಳೂರು: ಕೊರೊನಾ ಸೋಂಕು ವ್ಯಕ್ತಿಯ ಶ್ವಾಸಕೋಶದ ಜತೆಗೆ ವಿವಿಧ ಅಂಗಾಂಗಗಳಿಗೆ ಗಂಭೀರ ಹಾನಿ ಮಾಡಲಿದೆ. ವ್ಯಕ್ತಿ ಸತ್ತ ಬಳಿಕ ಆತನ ದೇಹದಲ್ಲಿ 18 ಗಂಟೆಗಳಿಗೂ ಅಧಿಕ ಸಮಯ ಸಕ್ರಿಯವಾಗಿ ಇರಲಿದೆ ಎನ್ನು
ವುದು ವಿಧಿವಿಜ್ಞಾನ ತಜ್ಞ ಡಾ. ದಿನೇಶ್ ರಾವ್ ನಡೆಸಿರುವ ಮರಣೋತ್ತರ ಶವ ಪರೀಕ್ಷೆಯಿಂದ ದೃಢಪಟ್ಟಿದೆ.
ಕೋವಿಡ್ ಪೀಡಿತ 62 ವರ್ಷದ ವ್ಯಕ್ತಿಯೊಬ್ಬರು 14 ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೃತಪಟ್ಟಿದ್ದರು. ಅವರ ಕುಟುಂಬದ ಸದಸ್ಯರ ಸಮ್ಮತಿ ಪಡೆದ ರಾವ್ ಅವರು, ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದರು. 12 ದಿನಗಳ ಹಿಂದೆ ಈ ಪ್ರಕ್ರಿಯೆ ನಡೆದಿದ್ದು, ಅದರ ವರದಿ ಈಗ ಬಂದಿದೆ.
‘ಎಚ್‌ಐವಿ, ಪ್ಲೇಗ್, ಮಲೇರಿಯಾ ಸೇರಿದಂತೆ ವಿವಿಧ ರೋಗಿಗಳು ಕಾಣಿಸಿಕೊಂಡಾಗ ಶವ ಪರೀಕ್ಷೆ ನಡೆಸಿ, ಚಿಕಿತ್ಸೆಯ ವಿಧಾನವನ್ನು ನಿರ್ಧರಿಸಲಾಗಿತ್ತು. ಆದರೆ, ಕೋವಿಡ್‌ಗೆ ಸಂಬಂಧಿಸಿದಂತೆ ಈ ರೀತಿಯ ಪರೀಕ್ಷೆಗಳು ನಡೆದಿರಲಿಲ್ಲ. ವ್ಯಕ್ತಿ ಮೃತಪಟ್ಟ 18 ಗಂಟೆಗಳ ಬಳಿಕ ಗಂಟಲು, ಮೂಗು, ಶ್ವಾಸಕೋಶ, ಶ್ವಾಸಕೋಶದ ನಾಳ, ಮುಖ ಮತ್ತು ಚರ್ಮದ ಮೇಲಿನ ಮಾದರಿಗಳನ್ನು ಸಂಗ್ರಹಿಸಿ, ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಯಿತು. ಗಂಟಲು ಹಾಗೂ ಮೂಗಿನ ದ್ರವದ ಮಾದರಿಗಳಲ್ಲಿ ವೈರಾಣುಗಳು ಕಾಣಿಸಿಕೊಂಡವು’ ಎಂದು ಡಾ. ದಿನೇಶ್ ರಾವ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಹೆಚ್ಚಿನ ಅಧ್ಯಯನ ಅಗತ್ಯ: ‘ಯಾವುದೇ ಒಂದು ಹೊಸ ಕಾಯಿಲೆ ಬಂದಾಗ ಅದರ ಬಗ್ಗೆ ಸೂಕ್ತ ಅಧ್ಯಯನಗಳು ನಡೆಯಬೇಕು. ಅದರ ಸ್ವರೂಪ ಹಾಗೂ ತೀವ್ರತೆಯನ್ನು ತಿಳಿದುಕೊಂಡಾಗ ಔಷಧಗಳನ್ನು ಸಂಶೋಧಿಸಲು ಹಾಗೂ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಒಂದು ಶವ ಪರೀಕ್ಷೆಯಿಂದ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಈ ಮಾದರಿಯಲ್ಲಿ ಇನ್ನಷ್ಟು ಶವಗಳ ಪರೀಕ್ಷೆ ನಡೆಯಬೇಕು. ಆಗ ವೈರಾಣು ಎಷ್ಟು ಅವಧಿಯವರೆಗೆ ಮೃತ ದೇಹದಲ್ಲಿ ಇರಲಿದೆ ಹಾಗೂ ಅಂಗಾಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದರ ಖಚಿತತೆ ಸಿಗಲಿದೆ. ಸರ್ಕಾರವು ಸಂರ್ಪಕಿಸಿದಲ್ಲಿ ಈ ಬಗ್ಗೆ ಇನ್ನಷ್ಟು ಅಧ್ಯಯನ ಹಾಗೂ ಪರೀಕ್ಷೆ ನಡೆಸಲು ಸಿದ್ಧವಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.