ADVERTISEMENT

ಬೌರಿಂಗ್ ಆಸ್ಪತ್ರೆ ನಿರ್ದೇಶಕರು ರಜೆಗೆ ತೆರಳಿದ್ದರ ಬಗ್ಗೆ ಡಾ.ಸುಧಾಕರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 11:58 IST
Last Updated 9 ಜುಲೈ 2020, 11:58 IST
   

ಬೆಂಗಳೂರು: ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರು ಸ್ವಂತ ಕೋರಿಕೆ ಮೇರೆಗೆ ರಜೆಗೆ ತೆರಳಿದ್ದು, ಕೋವಿಡ್ ಪರಿಸ್ಥಿತಿಯ ಸಮರ್ಥ ನಿರ್ವಹಣೆಗಾಗಿ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸ್ಪಷ್ಟನೆ ನೀಡಿದ್ದಾರೆ.

ಕೋವಿಡ್-19 ಚಿಕೆತ್ಸೆಗೆ ಮೀಸಲಾಗಿರುವ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ನಿರ್ದೇಶಕ ಡಾ ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ಆರು ವಾರಗಳ ಕಾಲ ಧಿಡೀರ್ ರಜೆ ಮೇಲೆ ಕಳುಹಿಸಿರುವ ವಿಚಾರ ಕಾಂಗ್ರೆಸ್‌ ನಾಯಕರ ಟೀಕೆಗೆ ಗುರಿಯಾಗಿತ್ತು. ಆಸ್ಪತ್ರೆ ವೈದ್ಯರನ್ನು ರಜೆ ಮೇಲೆ ಕಳುಹಿಸಿದ್ದಕ್ಕೆ ಮಾಜಿ ಸಚಿವ ಈಶ್ವರ್‌ ಖಂಡ್ರೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿ ಟ್ವೀಟ್‌ ಮೂಲಕ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:ಬೌರಿಂಗ್ ಆಸ್ಪತ್ರೆ ನಿರ್ದೇಶಕರನ್ನು ರಜೆ ಮೇಲೆ ಕಳಿಸಿದ್ದು ಯಾಕೆ: ಖಂಡ್ರೆ ಪ್ರಶ್ನೆ

ಈಶ್ವರ್‌ ಖಂಡ್ರೆ ಅವರಿಗೆ ಟ್ವೀಟ್‌ ಮೂಲಕವೇ ಪ್ರತಿಕ್ರಿಯಿಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, 'ಡಾ.ಮಂಜುನಾಥ್ ಅವರನ್ನು ತಾತ್ಕಾಲಿಕವಾಗಿ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಡೀನ್ ಹಾಗೂ ನಿರ್ದೇಶಕರ ಹುದ್ದೆಗೆ ಪ್ರಭಾರದಲ್ಲಿರಿಸಲಾಗಿತ್ತು. ಪ್ರಸ್ತುತ ಅವರು ಸ್ವಂತ ಕೋರಿಕೆ ಮೇರೆಗೆ ರಜೆಯಲ್ಲಿ ತೆರಳಿದ್ದು, ಕೋವಿಡ್ ಪರಿಸ್ಥಿತಿಯಲ್ಲಿ ಸಮರ್ಥ ನಿರ್ವಹಣೆಗಾಗಿ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಲಾಗಿದೆ' ಎಂದಿದ್ದಾರೆ.

ADVERTISEMENT

ರಾಜ್ಯದ ವಿರೋಧ ಪಕ್ಷದ ಕಾರ್ಯಾಧ್ಯಕ್ಷರಾಗಿ ವಾಸ್ತವಾಂಶ ಅರಿಯದೇ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ ಎಂದು ಕಾಂಗ್ರೆಸ್‌ ನಾಯಕ ಈಶ್ವರ್‌ ಖಂಡ್ರೆ ಅವರನ್ನು ಉದ್ದೇಶಿಸಿ ಡಾ.ಸುಧಾಕರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.