ADVERTISEMENT

ಕೋವಿಡ್: 7 ದಿನಗಳಲ್ಲಿ 54 ಸಾವಿರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 20:03 IST
Last Updated 28 ಆಗಸ್ಟ್ 2020, 20:03 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮತ್ತೆ 8,960 ಮಂದಿ ಕೋವಿಡ್ ಪೀಡಿತರಾಗಿರುವುದು ಹಾಗೂ ಸೋಂಕಿತರಲ್ಲಿ 136 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ಒಂದು ವಾರದಿಂದ ಸೋಂಕಿತರ ಸಂಖ್ಯೆ ಏರಿಕೆ ಕಂಡಿದ್ದು, ಈ ಅವಧಿಯಲ್ಲಿ 54,206 ಮಂದಿ ಕೋವಿಡ್‌ ಪೀಡಿತರಾಗಿದ್ದಾರೆ. ನಿತ್ಯ ಸರಾಸರಿ 7,743 ಮಂದಿ ಸೋಂಕಿತರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3.18 ಲಕ್ಷಕ್ಕೆ ಏರಿದ್ದು, ಸದ್ಯ ಸೋಂಕು ದೃಢ ಪ್ರಮಾಣ ಶೇ 11.70 ರಷ್ಟಿದೆ. 48 ಗಂಟೆಗಳಲ್ಲಿ 277 ಮಂದಿ ಸಾವಿಗೀಡಾಗಿರುವುದು ಖಚಿತವಾಗಿದೆ. ಮೃತರ ಸಂಖ್ಯೆ 5,368ಕ್ಕೆ ಏರಿದೆ.

ಈ ತಿಂಗಳಲ್ಲಿ ನಿತ್ಯ ಸರಾಸರಿ 50 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಒಂದೇ ದಿನ 23,416 ಆ್ಯಂಟಿಜೆನ್ ಸೇರಿದಂತೆ 64,226 ಪರೀಕ್ಷೆಗಳನ್ನು ನಡೆಸಲಾಗಿದೆ. ಕೊರೊನಾ ಸೋಂಕಿತರಲ್ಲಿ ಬೆಂಗಳೂರಿನಲ್ಲಿ 2,148 ಮಂದಿ ಸೇರಿ ರಾಜ್ಯದಲ್ಲಿ 7,464 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಗುಣವಾದವರ ಸಂಖ್ಯೆ 2.27 ಲಕ್ಷ ದಾಟಿದೆ. 86 ಸಾವಿರಕ್ಕೂ ಅಧಿಕ ಸೋಂಕಿತರು ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳು, ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ADVERTISEMENT

ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾದ ಹಾಗೂ ಗುಣವಾದವರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಅಧಿಕ ಮಂದಿ ಮೃತಪಟ್ಟಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಸೋಂಕಿತರ, ವಾಸಿಯಾದವರ ಹಾಗೂ ಮೃತರ ಸಂಖ್ಯೆ ಮಹಾರಾಷ್ಟ್ರದಲ್ಲಿ ಅತ್ಯಧಿಕವಿದೆ.

ಬಳ್ಳಾರಿಯಲ್ಲಿ 20 ಸಾವಿರ:ಬೆಂಗಳೂರಿನಲ್ಲಿ ಹೊಸದಾಗಿ 2,721 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.21 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 726 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಅಲ್ಲಿ ಒಂದು ವಾರದಲ್ಲಿ 4,105 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ.

ಬಳ್ಳಾರಿಯಲ್ಲಿ 584 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ ದಾಟಿದೆ. ದಕ್ಷಿಣ ಕನ್ನಡ (448), ದಾವಣಗೆರೆ (379), ಹಾಸನ (357), ಶಿವಮೊಗ್ಗ (314) ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ. ಶುಕ್ರವಾರ ದೃಢಪಟ್ಟ ಮರಣ ಪ್ರಕರಣಗಳಲ್ಲಿ 27 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಬೆಂಗಳೂರು (41), ಮೈಸೂರು (17), ಧಾರವಾಡ (9) ಶಿವಮೊಗ್ಗ(7) ಜಿಲ್ಲೆಯಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.