ADVERTISEMENT

Covid-19 Karnataka Update: ರಾಜ್ಯದಲ್ಲಿ ಒಂದೇ ದಿನ 38 ಸಾವಿರ ಮಂದಿಗೆ ಲಸಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 16:23 IST
Last Updated 18 ಜನವರಿ 2021, 16:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ರಾಜ್ಯದಲ್ಲಿಕೋವಿಡ್‌ ಲಸಿಕೆ ಅಭಿಯಾನದ ಅಡಿ ಸೋಮವಾರ ಸಾವಿರ ಕೇಂದ್ರಗಳಲ್ಲಿ 38,242 ಮಂದಿ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದರು. ಈವರೆಗೆ ಒಟ್ಟಾರೆ 55,550 ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದಂತಾಗಿದೆ.

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸೇರಿದಂತೆ ರಾಜ್ಯದಾದ್ಯಂತ 1,017 ಕೇಂದ್ರಗಳಿಂದ 81,169 ಸಿಬ್ಬಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ಆದರೆ, 38,242 (ಶೇ. 47.08) ಮಂದಿಗೆ ಮಾತ್ರ ಲಸಿಕೆ ಹಾಕಲು ಸಾಧ್ಯವಾಗಿದೆ.

ಅಭಿಯಾನದ ಮೊದಲ ದಿನ ರಾಜ್ಯದಾದ್ಯಂತ 243 ಆರೋಗ್ಯ ಕೇಂದ್ರಗಳಲ್ಲಿ 13,609 ಸಿಬ್ಬಂದಿ, ಎರಡನೇ ದಿನ 3,699 ಮಂದಿ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿದ್ದರು. ಭಾನುವಾರ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ವಿತರಿಸಲಾಗಿದ್ದರಿಂದ ಸಂಖ್ಯೆ ಕಡಿಮೆಯಾಗಿತ್ತು. ಮಂಗಳವಾರವೂ ಅಭಿಯಾನ ಮುಂದುವರಿಯಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

9 ಸಾವು:ರಾಜ್ಯದಲ್ಲಿಕೋವಿಡ್‌ನಿಂದ 9 ಮಂದಿ ಮೃತಪಟ್ಟಿರುವುದು ದೃಢಪಡುವುದರೊಂದಿಗೆ ಈವರೆಗೆ ಸೋಂಕಿನಿಂದ ಒಟ್ಟಾರೆ 12,175 ಮಂದಿ ಸಾವಿಗೀಡಾದಂತಾಗಿದೆ. 973 ಮಂದಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದು, ಒಟ್ಟು 9.12 ಲಕ್ಷ ರೋಗಿಗಳುಕೋವಿಡ್‌ನಿಂದ ಮುಕ್ತರಾಗಿದ್ದಾರೆ.

ಗುಣಮುಖ ಹೊಂದಿದವರಿಗಿಂತ ಸೋಂಕಿತರ ಸಂಖ್ಯೆ ಕಡಿಮೆ ಇದ್ದು, ಹೊಸದಾಗಿ 435 ಮಂದಿಯಲ್ಲಿಕೋವಿಡ್‌ ದೃಢಪಟ್ಟಿದೆ. ಈವರೆಗೆ, 9.32 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಕ್ರಿಯ ಪ್ರಕರಣಗಳ ಪೈಕಿ 8,033 ಮಂದಿ ಮನೆ, ಆಸ್ಪತ್ರೆಗಳಲ್ಲಿ ಆರೈಕೆ ಮತ್ತು ಚಿಕಿತ್ಸೆಯಲ್ಲಿದ್ದರೆ, 177 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 6, ಹಾಸನ, ಕೊಡಗು, ತುಮಕೂರಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿರುವುದನ್ನು ಹೊರತು ಪಡಿಸಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸೋಮವಾರಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.